ಚನ್ನಪ್ಪ ಎರೇಸೀಮೆಯವರ ಕೃತಿಗಳು

ಒಂದು ಪರಿಚಯ – ಓ. ಎಲ್. ಎನ್

ಚನ್ನಪ್ಪ ಎರೇಸೀಮೆಯವರ ಶಿಷ್ಯರಾಗಿದ್ದ,

ಪ್ರೊ. ಓ. ಎಲ್. ನಾಗಭೂಷಣಸ್ವಾಮಿಯವರಿಂದ…

ಪಂಡಿತ ಎರೇಸೀಮೆ ಚೆನ್ನಪ್ಪನವರು ನನಗೆ ಕನ್ನಡ ಕಲಿಸಿದ ಗುರು. ಚಿತ್ರದುರ್ಗದಲ್ಲಿ ಏಳನೆಯ ತರಗತಿ ಓದುತ್ತಿದ್ದಾಗ ನಮಗೆಲ್ಲ ಕನ್ನಡ ಪಾಠ ಹೇಳುತ್ತಿದ್ದರು. ಅದು ಸುಮಾರು 1962-63ರ ಅವಧಿ. ನಾನು ಹೋಗುತ್ತಿದ್ದದ್ದು ಸೇಂಟ್ ಜೋಸೆಫ್ ಕಾನ್ವೆಂಟಿಗೆ. ಆಗ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತಿದ್ದದ್ದು ಕನ್ನಡ ಮಾತ್ರ. ಗಣಿತ, ವಿಜ್ಞಾನ, ಇಂಗ್ಲಿಶು ಇವೆಲ್ಲ ಈಗಿನ ಮಕ್ಕಳಿಗೆ ಇರುವಷ್ಟು ಅಗಾಧ ಪ್ರಮಾಣದಲ್ಲಿ ನಾವು ಓದಬೇಕಾಗಿರಲಿಲ್ಲ. ಆದರೂ ಅವೆಲ್ಲ ‘ಪಾಠ’ ಮಾತ್ರ, ಪರೀಕ್ಷೆ ಮುಗಿದ ತಕ್ಷಣ ಮರೆಯುವುದಕ್ಕೆ ಮಾತ್ರ ಅನ್ನುವ ದೃಢವಾದ ನಂಬಿಕೆ ನನ್ನಲ್ಲಿತ್ತು. ಚೆನ್ನಪ್ಪನವರ ಕ್ಲಾಸುಗಳು ಮಾತ್ರ ಬಹಳ ಆಪ್ತವಾಗಿ, ಜೀವಂತವಾಗಿ ಇರುತ್ತಿದ್ದವು. ಅವರ ಪಾಠದಲ್ಲಿ ಹಾಸ್ಯ ಜೀವಂತವಾಗಿರುತ್ತಿತ್ತು. ಯಾವುದೋ ಪಾಠದಲ್ಲಿ ಹೆಂಡದ ಪ್ರಸ್ತಾಪವಿತ್ತೋ, ಅಥವ ಮೇಷ್ಟರ ವಿವರಣೆಯಲ್ಲಿ ಅದು ಬಂತೋ ಗೊತ್ತಿಲ್ಲ. ಅವರು ಹೆಂಡ, ಹೆಂಡದ ಪರಿಣಾಮ ವಿವರಿಸಿದ ರೀತಿಯಿಂದ ನಮ್ಮ ಇಡೀ ಕ್ಲಾಸು ನಕ್ಕಿದ್ದ ರೀತಿ ಮಾತ್ರ ಇವತ್ತೂ ನೆನಪಿದೆ.

ನನ್ನ ಕಥೆ

ಅವರ ‘ನನ್ನ ಕಥೆ’ ಎಂಬ ಪುಸ್ತಕ ಓದಿದ್ದು ಇತ್ತೀಚೆಗೆ. ಅದು 1999ರಲ್ಲಿ ಪ್ರಕಟವಾಗಿದ್ದರೂ ಅದರ ಬಗ್ಗೆ ತಿಳಿದದ್ದು ಮಾತ್ರ 2019ರಲ್ಲಿ. ಕನ್ನಡದ ಉತ್ತಮ ಆತ್ಮಕಥನಗಳಲ್ಲಿ ಒಂದು ಅನ್ನಿಸುವ ಈ ಕೃತಿ ನನ್ನ ಓರಗೆಯ ಓದುಗ, ಲೇಖಕರ, ವಿಮರ್ಶಕರ ಗಮನವನ್ನು ಯಾಕೆ ಸೆಳೆಯಲಿಲ್ಲ ಅನ್ನುವ ಕುತೂಹಲ ಹುಟ್ಟಿತು. ಜ್ಞಾನದ ಮೂಲ ಇಂಗ್ಲಿಶ್ ಮಾತ್ರವೇ ಎಂಬ ನಂಬಿಕೆ ನಮ್ಮಲ್ಲಿ ಬೆಳೆದು ಬಲಿತಿರುವುದು, ಚನ್ನಪ್ಪನವರು ಇಂಗ್ಲಿಶ್ ಅರಿಯದ, ಸ್ವಲ್ಪ ಸಂಸ್ಕೃತ ಬಲ್ಲ, ಕೇವಲ ಕನ್ನಡದ ಸಾಹಿತ್ಯ ಮತ್ತು ಬೋಧನೆಗಳಿಂದಲೇ ತಮ್ಮ ವ್ಯಕ್ತಿತ್ವ, ಚಿಂತನೆಗಳನ್ನು ರೂಪಿಸಿಕೊಂಡದ್ದು ಇದಕ್ಕೆ ಮುಖ್ಯ ಕಾರಣವೆಂದು ತೋರುತ್ತದೆ. ಇದು ಚನ್ನಪ್ಪನವರ ಮಿತಿಗಿಂತ ಮಿಗಿಲಾಗಿ ನಮ್ಮ ಓದು ಎಷ್ಟು ಸಂಕುಚಿತವಾಗುತ್ತ ನಡೆದಿದೆ ಅನ್ನುವುದರ ನಿದರ್ಶನವೂ ಆದೀತು. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಹುಟ್ಟಿ 1930-40ರ ದಶಕಗಳಲ್ಲಿ ಪ್ರಬುದ್ಧರಾದ ಲೇಖಕರು ಬಹಳ ಮಟ್ಟಿಗೆ ಕನ್ನಡ ಮನಸನ್ನು ಹೊಂದಿದ್ದವರು, ದೇಸೀ ಚಿಂತನೆಯನ್ನು ರೂಪಿಸುತ್ತಿದ್ದವರು ಅನಿಸುತ್ತದೆ. ಆದರೆ ನಾವೀಗ ಅಂಥ ಸ್ಥಿತಿಗೆ ಪ್ರಯತ್ನಪಟ್ಟರೂ ಮರಳಲಾರೆವು. ಬ್ರಿಟಿಶ್ ಆಳ್ವಿಕೆಯಲ್ಲಿ ಕನ್ನಡ ಬೋಧನೆಗೆ, ಮಾದ್ಯಮಕ್ಕೆ ಇದ್ದ ಪ್ರಾಮುಖ್ಯ ಸ್ವಾತಂತ್ರ್ಯಾನಂತರ ಕಡಮೆಯಾಗುತ್ತ ಬಂದದ್ದು ಎಂಥ ವಿಪರ್ಯಾಸ. ಸುಮಾರು 1940-50ರ ದಶಕದ ವರೆಗಿನ ಅವಧಿಯ ಕನ್ನಡ ಮೇಷ್ಟರುಗಳಲ್ಲಿದ್ದ ಆತ್ಮವಿಶ್ವಾಸ, ಕನ್ನಡದ ಮೂಲಕವೇ ಸುತ್ತಲ ಜಗತ್ತನ್ನು ಅರಿಯ ಬಲ್ಲೆ, ತಿಳಿಸಬಲ್ಲೆ ಎಂಬ ಉತ್ಸಾಹ, ಇಂಗ್ಲಿಶನ್ನು, ಸಂಸ್ಕೃತವನ್ನು ಓದಿದ್ದರೂ ಕನ್ನಡವೇ ಕೇಂದ್ರವಾಗಿದ್ದ ಮನಸ್ಸು ಇವೆಲ್ಲ ಇಲ್ಲವಾಗಿದ್ದು ನಮ್ಮ ತಲೆಮಾರಿನ ದುರಂತವೆನಿಸುತ್ತದೆ.

ಇದು ಕೇವಲ ಚನ್ನಪ್ಪ ಎರೆಸೀಮೆಯವರ ಬದುಕಿನ ಕಥೆಯಲ್ಲ. ಮನೆ, ಊರು, ಜಾತಿ, ಸಂಸ್ಥೆ, ನಾಟಕ, ಸಂಗೀತ, ವಿಸ್ತಾರವಾದ ಜನಸಂಪರ್ಕ, ಛಲ, ಸಂವೇದನಾಶೀಲತೆ ಇಂಥ ಎಲ್ಲ ಸಂಗತಿಗಳು ಸೇರಿ ಮೇಷ್ಟರೊಬ್ಬರ ವ್ಯಕ್ತಿತ್ವ ರೂಪುಗೊಂಡ ಕಥೆ; ಬಯಲು ನಾಡಿನ, ಮಲೆನಾಡಿನ ಅಂಚಿನ, ಮತ್ತು ಇಪ್ಪತ್ತನೆಯ ಶತಮಾನದ ಮೂರನೆಯ ದಶಕದ ನಗರಗಳ ಬದುಕಿನಲ್ಲಿ ಆಗುತ್ತಿದ್ದ ಬದಲಾವಣೆಯ ಕಥೆಯೂ ಹೌದು. ಅಷ್ಟು ಮಾತ್ರವಲ್ಲ ಪ್ರಾದೇಶಿಕವಾದ ಊಟ, ಉಪಚಾರ, ಹಬ್ಬ, ಊರ ಸಂಬಂಧಗಳು, ಮಠಗಳ ಬದುಕು ಇತ್ಯಾದಿಯೆಲ್ಲ ಸೇರಿ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಬದುಕಿನ ಚಿತ್ರಣವೂ ಹೌದು.

ಕನ್ನಡದಲ್ಲಿ ಕಿರು ಕಥನಗಳ ರೂಪದಲ್ಲಿ ಎಂ.ಆರ್.ಶ್ರೀಯವರು ಬರೆದಿರುವ ‘ರಂಗಣ್ಣನ ಕನಸಿನ ದಿನಗಳು’ ರೀತಿಯ ಬರವಣಿಗೆ ಇದೆ. ಪ್ರಾಸಂಗಿಕವಾಗಿ ತಮ್ಮ ಬಾಲ್ಯ ಕಾಲದ ಮೇಷ್ಟರುಗಳನ್ನು ಹಿರಿಯ ಲೇಖಕರು ನೆನೆದದ್ದೂ ಇದೆ. ಅನುಭಾವದ ಅಂಚಿನಲ್ಲಿ ಚಲಿಸುವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಬರಹವೂ ಇದೆ. ಅಹಂಕಾರಿಯಾದ ಮೇಷ್ಟರೊಬ್ಬ ತನ್ನ ಮಿತಿಗಳನ್ನು ಮೀರಿದ ಕಥೆಯನ್ನು ಶಿವರಾಮ ಕಾರಂತರು ‘ಕನ್ನಡಿಯಲ್ಲಿ ಕಂಡಾತ’ ಕಾದಂಬರಿಯಲ್ಲಿ ವಿವರಿಸಿದ್ದೂ ಇದೆ. ಆದರೆ ಸಮಾಜದ ಕಣ್ಣಿನಲ್ಲೂ ಯಶಸ್ಸು ಪಡೆದ ಮೇಷ್ಟರು ತಮ್ಮ ವೃತ್ತಿಜೀವನಕ್ಕೆ ಸಿದ್ಧರಾದ ಪರಿಯನ್ನು ವಿವರಿಸುವ, ಮೇಷ್ಟರೊಬ್ಬರು ರೂಪುಗೊಳ್ಳುವ ಕಥನ ನನಗೆ ಗೊತ್ತಿರುವುದು ಇದೊಂದೇ ಹಾಗಾಗಿ ಇದು ವಿಶಿಷ್ಟ.

ಎರೆಸೀಮೆಯವರೇ ಹೇಳುವ ಹಾಗೆ ಪರಿಮಿತ ಬಂಡವಾಳವನ್ನು ಶ್ರಮಪಟ್ಟು ಬೆಳೆಸುತ್ತ ‘ಕಥೆ ಮಾಡುವವರಾಗಿ’ ಅದರ ಆಧಾರದ ಮೇಲೆ ಅಧ್ಯಾಪನ ತರಬೇತಿ ಪಡೆಯುತ್ತ  ಎರಡೂ ಕಸುಬುಗಳು ಪರಸ್ಪರ ಪ್ರಭಾವಗೊಳಿಸಿ ಅವರ ವ್ಯಕ್ತಿತ್ವ ರೂಪುಗಂಡ ಕಥೆ ಕುತೂಹಲ ಹುಟ್ಟಿಸುತ್ತದೆ. ಆಗಿನ ಕಾಲದ ಜನಪ್ರಿಯ ಸಂಸ್ಕೃತಿಯ ಭಾಗವಾಗಿದ್ದ ಕಥಾ ಕಾಲಕ್ಷೇಪವನ್ನು ಕೇಳಿ ಕಲಿತ ಸಂಗೀತ, ಕೇಳಿ ತಿಳಿದ ಕಥೆ, ಶಾಲೆಯಲ್ಲಿ ಓದಿದ ಕನ್ನಡ ಕಾವ್ಯಭಾಗಗಳ, ಸ್ವಂತ ಓದಿಕೊಂಡ ಅನುಭವ ಬೆರೆಸಿ ತಾನೂ ಜನಪ್ರಿಯರಾದ ಎರೆಸೀಮೆಯವರು ಇದು ನಿಜವೋ ಅಥವಾ ಬರಿಯ ತೋರಿಕೆಯೋ, ಜನರನ್ನು ಮರುಳುಮಾಡುವ ವಿಧಾನವೋ ಎಂದು ಪರೀಕ್ಷಿಸಿಕೊಳ್ಳುವುದೂ ಇದೆ. ‘ಏನೂ ಗೊತ್ತಿಲ್ಲದವರು ಏನೂ ಗೊತ್ತಿಲ್ಲದವರಿಗೆ ಏನೂ ಗೊತ್ತಾಗದಂತೆ ಹೇಳುವ ವಿಧಾನ!’ (ಪುಟ 347) ಎಂಬ ಮಾತನ್ನೂ ಆಡಿದ್ದಾರೆ. ಹಾಗಲ್ಲದೆ ಇದು ಅಧ್ಯಾಪಕನಾಗಬೇಕೆಂಬ ತನ್ನ ಧ್ಯೇಯ್ಲಕ್ಕೆ ಆರ್ಥಿಕ ನೆರವು ಗಳಿಸುವ ಏಕೈಕ ಮಾರ್ಗ ಅನ್ನುವ ಅರಿವಿದೆ. ಸ್ವಾತಂತ್ರ್ಯ ಸಂಗ್ರಾಮಕಾಲದಲ್ಲಿ ‘ಕಾಂಗ್ರೆಸ್ ಕಥೆಗಳನ್ನು’ ಮಾಡಿದ ಪ್ರಸಂಗ ಅದಕ್ಕೆ ಜನರು ತೋರುತ್ತಿದ್ದ ಪ್ರತಿಕ್ರಿಯೆ ಇವು ಸಾಂಸ್ಕೃತಿಕ ಅಧ್ಯಯನಕ್ಕೆ ಒದಗುವ ವಸ್ತುವಾಗಿ ತೋರುತ್ತದೆ.

ಎರೆಸೀಮೆಯವರ ಬದುಕಿನಲ್ಲಿ ಕೂಡಿಕೊಂಡ, ಪ್ರಭಾವಿಸಿದ, ನೆರವಾದ, ಅಪರೂಪಕ್ಕೆ ತೊಡಕಾಗಿ ಪೇಚಿಗೆ ಸಿಕ್ಕಿಸಿದ  ಅಸಂಖ್ಯ ವ್ಯಕ್ತಿಗಳ ಚಿತ್ರಣವೂ ಇಲ್ಲಿದೆ. ಇದು ಈ ಕೃತಿಯ ‘ಸಮಾಜಶಾಸ್ತ್ರ’ ಸಮಾಜದ ಬೇರೆ ಬೇರೆ ಸ್ತರ, ಉದ್ಯೋಗ, ಜಾತಿಗಳವರ ಒಡನಾಟದಲ್ಲಿ ಮೇಷ್ಟರು ರೂಪುಗೊಂಡ ಕಥೆ. ಚಹಾದ ಹುಚ್ಚು ತನ್ನ ಪರಿಸರದಲ್ಲಿ ಹರಡಿದ ಬಗೆಯನ್ನು, ಆ ಕುರಿತ ತಮಾಷೆಯಾದ ಟೀಕೆಯನ್ನೊಳಗೊಂಡ ಹಾಡುಗಳನ್ನು ದಾಖಲಿಸುತ್ತಲೇ  ಹೋಟೆಲುಗಳು ಕ್ರಮೇಣ ಬೇರೂರಿದ ಬಗೆಯನ್ನು ಹಾಗೇ ಗಾಂಜಾದ ಬಳಕೆಯನ್ನೂ ಚಿತ್ರಿಸುತ್ತ ‘ನನ್ನ ಕಥೆ’ ತೀರ ಸಹಜವಾಗಿ ಸಾಮಾಜಿಕ  ಸ್ಥಿತ್ಯಂತರವನ್ನು ದಾಖಲಿಸುತ್ತದೆ. ಹಲವು ಮಠಗಳು ಅಲ್ಲಿನ ಸ್ವಾಮಿಗಳು ಎರೆಸೀಮೆಯವರ ಮೇಲೆ ಪ್ರಭಾವ ಬೀರಿದ್ದನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಬ್ರಾಹ್ಮಣೇತರ ಸಮುದಾಯಗಳ ಶೈಕ್ಷಣಿಕ ಬೆಳವಣಿಗೆಗೆ ಮಠಗಳು ಎಷ್ಟು, ಎಂಥ ನೆರವು ನೀಡಿದವು, ಕೃತಜ್ಞತೆಗೆ ಪಾತ್ರವಾಗಿದ್ದವು ಅನ್ನುವುದನ್ನು ಕಂಡರೆ ಮನಸ್ಸು ತುಂಬಿ ಬರುತ್ತದೆ. ಹಾಗೆಯೇ ನಮ್ಮ ಕಾಲದ ಮಠಗಳು ಬೃಹತ್ ವಾಣಿಜ್ಯೋದ್ಯಮವಾಗಿರುವ ಸ್ಥಿತಿಗೆ ಹೋಲಿಸಿದರೆ ಮನಸ್ಸು ಖಿನ್ನವೂ ಆಗುತ್ತದೆ. ಕೃತಿಯ ಇಂಥ ಭಾಗಗಳು ಸಮಾಜ ಮತ್ತು ಧರ್ಮದ ಸಂಬಂಧದ ಚಿತ್ರಣವಾಗಿ ಮನಸ್ಸನ್ನು ಸೆಳೆಯುತ್ತವೆ.

ಕುತೂಹಲದ ಇನ್ನೊಂದು ಸಂಗತಿ ಎಂದರೆ ತಾವು ಓದಿದ ಕವಿಗಳ ವರ್ಣನೆಯನ್ನು ವಾಸ್ತವಕ್ಕೆ ಹೋಲಿಸಿ ನೋಡುವ ಎರೆಸೀಮೆಯವರ ಪ್ರವೃತ್ತಿ. ಉದಾಹರಣೆಗೆ ಪುಟ 256ರಲ್ಲಿ ಕಾಣಿಸಿಕೊಳ್ಳುವ ಮಾವಿನ ಮರದ ವರ್ಣನೆ. ಅದು ಪಂಪ, ಷಡಕ್ಷರರ ವ್ಯಾಖ್ಯಾನವಾಗುತ್ತ, ಬನವಾಸಿಯ ಪ್ರಸ್ತಾಪವಾಗುತ್ತ, ಹಲಸು ಮತ್ತು ಮಾವು ಹೇಗೆ ಬಯಲು ಸೀಮೆ ಮತ್ತು ಮಲೆನಾಡಿನ ವೈಶಿಷ್ಟ್ಯವೆಂಬ ಸಾಂಸ್ಕೃತಿಕ ವಿಶ್ಲೇಷಣೆಯಾಗುತ್ತ, ಕೊನೆಗೆ ಅವರು ಕಂಡ ಮಾವಿನ ಮರ ಕನಸಿನಲ್ಲಿ ಅದ್ಭುತವಾಗಿ ಬೆಳೆದು ನಿಲ್ಲುವ ವರ್ಣನೆಯನ್ನು ನೋಡಬಹುದು. ಮಲೆನಾಡಿನ ಮತ್ತು ಬಯಲು ಸೀಮೆಯ ವಿವಿಧ ಬಗೆಯ ಅಡುಗೆಗಳ, ಊಟದ ಕ್ರಮದ ವಿವವರಗಳೂ ಈ ಕೃತಿಯಲ್ಲಿ ಧಂಡಿಯಾಗಿವೆ. ತಾಯಿಯ ಬಗ್ಗೆ ಹೇಳುವ ಮಾತುಗಳು (ಪುಟ 192-3) ದೊಡ್ಡಪ್ಪ, ಅಜ್ಜ ಇವರ ಬದುಕಿನ ಚಿತ್ರಣ, ತನ್ನ ಅಣ್ಣನ ಬಗ್ಗೆ, ಅವನ ಸಾವಿಗೆ ತಾನೇ ಕಾರಣನಾದೆನೋ ಎಂದು ಆಘಾತಗೊಂಡ ವರ್ಣನೆ ಇವನ್ನೆಲ್ಲ ನೋಡಿದರೆ ಎರೆಸೀಮೆಯವರು ಜೀವನ ಚರಿತ್ರೆಯ ಬದಲಾಗಿ ಕಾದಂಬರಿಯನ್ನು ಬರೆದಿದ್ದರೆ ಹೆಚ್ಚು ಸ್ವತಂತ್ರವಾಗಿ, ಕಲ್ಪನಾ ಸಮೃದ್ಧಿಯೊಡನೆ ಒಳ್ಳೆಯ ಕಾದಂಬರಿಯೊಂದು ಸಿಗುತಿತ್ತು ಅನಿಸುತ್ತದೆ.

ಕನ್ನಡದಲ್ಲಿ ಅರಟಾಳು ರುದ್ರಗೌಡರ ಜೀವನ ಚರಿತ್ರೆಯನ್ನು ಹೊರತು ಪಡಿಸಿದರೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಕನ್ನಡ ಬದುಕಿನ ಸಮೃದ್ಧ ವಿವರಗಳು, ದಾಖಲೆಗಳು ಸಿಗುವುದು ಎರೆಸೀಮೆಯವರ ‘ನನ್ನ ಕಥೆ’ಯಲ್ಲಿ ಮಾತ್ರ ಎಂದು ನನ್ನ ಓದಿನ ಮಿತಿಯಲ್ಲಿ ನನಗನ್ನಿಸಿದೆ. ಒಂದು ಅಧಿಕಾರವಂತರ ಕಣ್ಣಿಗೆ ಕಂಡ ಬದುಕು, ಇನ್ನೊಂದು ಬದುಕುವುದಕ್ಕಾಗಿ ‘ಸಾತ್ವಿಕ ಹೋರಾಟ’ ನಡೆಸಿ ಪಂಡಿತ ಪರೀಕ್ಷೆ ಬರೆದು ಮೇಷ್ಟರಾದವರು ಕಂಡ ಬದುಕು. ಎರಡೂ ಪೂರಕವಾಗಿ ಕಾಣುತ್ತವೆ.

ಷಡಕ್ಷರ ಕವಿಯ ರಾಜಶೇಖರ ವಿಳಾಸ, ಬಸವರಾಜ ವಿಜಯಗಳ ಗದ್ಯಾನುವಾದಗಳು ಎರೆಸೀಮೆಯವರ ವಿದ್ವತ್‍ಪೂರ್ಣ ಕೃತಿಗಳು. ಲಕ್ಷ್ಮೀಶ ಮತ್ತು ಷಡಕ್ಷರ ಕವಿಯ ಕೃತಿಗಳನ್ನು ಗಟ್ಟಿಯಾಗಿ, ಸ್ಪಷ್ಟವಾಗಿ ಓದಿ ಅರ್ಥ ವಿವರಣೆ ಮಾಡಬಲ್ಲವರು ಮಾತ್ರವೇ ನಿಜವಾದ ವಿದ್ಯಾವಂತರೆಂದು ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ತಿಳಿದಿದ್ದರು. ನಾವು ಕಾಲೇಜಿಗೆ ಹೋಗುವ ಹೊತ್ತಿಗೆ ರಾಜಶೇಖರ ವಿಳಾಸದ ಎರಡು ಆಶ್ವಾಸಗಳು ಮಾತ್ರ ಓದಬೇಕಾಗಿತ್ತು. ಆದರೆ 1970ರ ವೇಳೆಗೆ ಪ್ರಬಲಿಸಿದ್ದ ಸಾಹಿತ್ಯಾಧ್ಯಯನ ಮಾದರಿಯು ಷಡಕ್ಷರಿಯಂಥ ಕವಿಯನ್ನು ನಿರ್ಲಕ್ಷ್ಯಮಾಡುವುದನ್ನೇ ನಮಗೆ ಕಲಿಸಿತು. ಎರೆಸೀಮೆಯವರ ನನ್ನ ಕಥೆಯನ್ನು ಓದುತ್ತಿದ್ದರೆ ಷಡಕ್ಷರನ ಕೃತಿಗಳು ಕಥಾಭಿನಯಕ್ಕೆ, ಅಂದರೆ ಕಥೆಮಾಡುವುದಕ್ಕೆ, ಒದಗಿಬರುವ ಭಾಷಾ ರೂಪಗಳು ಅನ್ನಿಸುವುದಕ್ಕೆ ಶುರುವಾಯಿತು. ಷಡಕ್ಷರಿಯನ್ನು ಬೇರೆಯ ರೀತಿಯಲ್ಲೇ ನೋಡಬೇಕು ಅನಿಸಿತು. ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕ ಮುಗಿಯುತ್ತಿರುವ ಹೊತ್ತಿನಲ್ಲಿ ಲಕ್ಷ್ಮೀಶನಾಗಲೀ ಷಡಕ್ಷರಿಯೇ ಆಗಲಿ ಕನ್ನಡ ಅಧ್ಯಾಪಕರ, ವಿದ್ವಾಂಸರ, ವಿದ್ಯಾರ್ಥಿಗಳ, ಸಂಶೋಧಕರ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ನಿಜ. ಆದರೆ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ಇಂಥ ಕವಿಗಳ ಮರುಪರಿಶೀಲನೆ ಅಗತ್ಯವಾಗಿದೆ. ಅಂಥ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಎರೆಸೀಮೆಯವರ ಈ ಗದ್ಯಾನುವಾದಗಳು ಬಹಳ, ಬಹಳ ಸಹಾಯಮಾಡುತ್ತವೆ. ಇದೇ ಗುಂಪಿಗೆ ಸೇರಿದ್ದು ಎರೆಸೀಮೆಯವರು ಮತ್ತು ದೇವೀರಪ್ಪನವರು ಸಂಪಾದಿಸಿರುವ ಷಟ್ಸ್ಥಲ ವಲ್ಲಭ. ಈ ಕೃತಿ ನನಗೆ ಸಂಪೂರ್ಣ ಅಪರಿಚಿತವಾದದ್ದರಿಂದ ಏನೂ ಹೇಳಲಾರೆ.

‘ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನ’ ಎರೆಸೀಮೆಯವರ ಸ್ವತಂತ್ರ ಕೃತಿ. ಇದು ತಮ್ಮ ಬದುಕಿನ ರೀತಿಯಿಂದಲೇ ಸುತ್ತಲ ಪರಿಸರದ ಮೇಲೆ ಪ್ರಭಾವ ಬೀರಿದ, ಸ್ವತಃ ಎರೆಸೀಮೆಯವರ ಬದುಕಿನ ಮೇಲೂ ಗಾಢವಾದ ಪ್ರಭಾವ ಬೀರಿದ ಶಿರಾಳಕೊಪ್ಪದ ಚನ್ನಮಲ್ಲಿಕಾರ್ಜುನ ಅವರ ಜೀವನ ಚರಿತ್ರೆ. ಉದ್ದಾನೇಶ ಚರಿತೆಯು 1993ರಲ್ಲಿ ಎರೆಸೀಮೆಯವರು ಷಟ್ಪದೀ ರೂಪದಲ್ಲಿ ರಚಿಸಿರುವ ಕಾವ್ಯ ರೂಪದ ಜೀವನ ಚರಿತ್ರೆ.  ಇವೆರಡೂ ಎರೆಸೀಮೆಯವರನ್ನು ಪ್ರಭಾವಿಸಿದ ಮಹಾ ಚೇತನಗಳ ಜೀವನ ಚರಿತ್ರೆ. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಷಟ್ಪದಿ ರೂಪದಲ್ಲಿ ಸುಮಾರು ಐನೂರು ಪುಟಗಳಷ್ಟು ದೀರ್ಘವಾದ ಕೃತಿಯನ್ನು ಎರೆಸೀಮೆಯವರು ರಚಿಸಿದ್ದಾರೆಂದು ಆಶ್ಚರ್ಯವಾಗುತ್ತದೆ. ಆದರೂ, ಕಾವ್ಯದ ಬಗ್ಗೆ ಕನ್ನಡದ ಓದುಗರ ಕಲ್ಪನೆಯೇ ಸಂಪೂರ್ಣವಾಗಿ ಬದಲಾಗಿರುವ ಈ ಕಾಲದಲ್ಲಿ ಈ ಕೃತಿಯನ್ನು ಓದುವುದು ಕಷ್ಟವಾಗುತ್ತದೆ. ಚನ್ನಮಲ್ಲಪ್ಪನವರ ಬದುಕಿನ ಕಥೆಯಾದರೋ ಇಪ್ಪತ್ತನೆಯ ಶತಮಾನದ ಸಾತ್ವಿಕ ಜೀವವೊಂದು, ಲೌಕಿಕವಾಗಿಯೂ ಧಾರ್ಮಿಕವಾಗಿಯೂ ಬದುಕು ನಡೆಸಿದ ಬಗೆಯನ್ನು ತಿಳಿಸುತ್ತದೆ.

ಸಿದ್ಧಗಂಗಾ ಶ್ರೀ ಮತ್ತು ದಾಸೋಹ ಶ್ರೀ ಇವು ಎರೆಸೀಮೆಯವರು ಸಂಪಾದಿಸಿದ ನಿಯತಕಾಲಿಗಳು. ಮಠವೊಂದರ ನಿಯತಕಾಲಿಕ ಹೇಗೆ ಸಾಂಸ್ಕೃತಿಕವಾದ ಹಲವು ಮುಖ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲಬಹುದು ಎಂಬುದು ಈ ಸಂಗ್ರಹಿತ ಸಂಪುಟಗಳ ಮೂಲಕ ಸಂಶೋಧಕರಿಗೆ ತಿಳಿಸಿಕೊಡುವಂತಿವೆ.

ಜೇನು ಮತ್ತು ತೆಂಗು ಇವೆರಡೂ ಉದ್ಯಮ ಮತ್ತು ತೋಟಗಾರಿಕೆಯ ಬಗ್ಗೆ ಬಹಳ ಸರಳವಾಗಿ ಸ್ಪಷ್ಟವಾಗಿ ವಿವರಿಸುವ ಪುಸ್ತಕಗಳು. ತೆಂಗು ಅನ್ನುವುದನ್ನು ನಾನು ಎಂಟನೆಯ ತರಗತಿಯಲ್ಲಿದ್ದಾಗ ಮೇಷ್ಟು ಬರೆದ ಪುಸ್ತಕ ಎಂದು ನೋಡಿದ್ದ ನೆನಪಿದೆ. ಪ್ರಾಥಮಿಕ/ಮಾಧ್ಯಮಿಕ ಮಕ್ಕಳ ಪಠ್ಯಪುಸ್ತಕವಾಗುವಂತೆ ರಚಿಸಿರುವ ಕೃತಿಗಳು ಇವು. ಕನ್ನಡದ ಮೂಲಕವೇ ಮಕ್ಕಳ ಶಿಕ್ಷಣ ನಡೆಯಬೇಕು ಎಂದು ಬಾಯಿ ಮಾತಿನಲ್ಲಿ ಹೇಳುತ್ತಿರುವ ಈ ಕಾಲಮಾನದಲ್ಲಿ ಸುಮಾರು ಐವತ್ತು ವರ್ಷದ ಹಿಂದೆಯೇ ನಡೆದ ಇಂಥ ಪ್ರಯೋಗಗಳು ಹೊಸ ಉತ್ಸಾಹವನ್ನಾದರೂ ಹುಟ್ಟಿಸಲಿ ಎಂದು ಹಾರೈಸಬಹುದು ಅಷ್ಟೇ.

ವಿಶ್ವವಿದ್ಯಾಲಯಗಳ ಪದವಿ ಪಡೆಯದ, ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡದ, ಇಂಗ್ಲಿಶಿನ ಪರಿಚಯವಿರದ, ತಕ್ಕ ಮಟ್ಟಿನ ಸಂಸ್ಕೃತವನ್ನು ಕಲಿತ, ಆದರೆ ಓದಿದ ಕೃತಿಗಳ ಮುಖಾಂತರವೇ, ಬದುಕಿನ ರೀತಿಯಲ್ಲೇ ತನ್ನ ಕಾಲದ ಸಮಾಜದ, ಸಂಸ್ಕೃತಿಯ ಚಿತ್ರಣವನ್ನು ನೀಡಿದ ಎರೆಸೀಮೆಯವರ ವಿದ್ಯಾರ್ಥಿಯಾಗುವ ಭಾಗ್ಯ ಒಂದು ವರ್ಷದ ಮಟ್ಟಿಗಾದರೂ ನನಗೆ ದೊರಕಿತ್ತು. ಮತ್ತೆ ಅವರನ್ನು ಕಂಡದ್ದು ಸುಮಾರು 1995ರಲ್ಲಿ. ಅವರ ನನ್ನ ಕಥೆಯನ್ನು ಓದಿದ್ದು 2019ರಲ್ಲಿ! ಎರೆಸೀಮೆಯವರ ಮಗಳು ವೈಸಿ ಕಮಲಾ ಅವರ ಮೂಲಕ ಎರೆಸೀಮೆಯವರ ಕೃತಿಗಳು ಅಂತರ್ಜಾಲದಲ್ಲಿ ಲಭ್ಯವಾಗುತ್ತಿವೆ. ಗೆಳೆಯ ಓಂಶಿವಪ್ರಕಾಶ್ ಕನ್ನಡದ ಕೆಲಸಕ್ಕಾಗಿ ತಮ್ಮ ತಂತ್ರಜ್ಞಾನದ ತಿಳಿವಳಿಕೆಯನ್ನು ಬಳಸುತ್ತ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಸಂಚಯ, ವಚನ ಸಂಚಯ ಇಂಥವನ್ನು ಬಲ್ಲವರಿಗೆ ಅವರ ಬಗ್ಗೆ ಹೇಳಬೇಕಾದುದೇನೂ ಇಲ್ಲ. ಈ ಇಬ್ಬರ ಪರಿಶ್ರಮದ ಫಲವಾಗಿ ‘ನನ್ನ ಕಥೆ’ಯನ್ನು ಓದುತ್ತ, ಮಿಕ್ಕ ಕೃತಿಗಳನ್ನು ನೋಡುತ್ತ, ಇಲ್ಲಿ ಹೇಳಲಾಗದ, ಹೇಳಬೇಕಾಗಿಲ್ಲದ ನನ್ನದೇ ಕಥೆಯ ಎಷ್ಟೋ ಭಾಗಗಳನ್ನು ನೆನೆಯುವಂತಾಗಿದೆ. ಈ ಎರಡು ಮಾತನ್ನು ನಮ್ಮ ಮೇಷ್ಟರ ಬಗ್ಗೆ ಬರೆಯುವಂತಾದದ್ದಕ್ಕೆ ಶ್ರೀಮತಿ ಕಮಲಾ ಮತ್ತು ಓಂ ಶಿವಪ್ರಕಾಶ್ ಅವರಿಗೆ ಕೃತಜ್ಞ.

ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

Share This