ಸಿ. ಚಂದ್ರಮತಿ
ಜೋಗಿಮಟ್ಟಿ ರೋಡ್
5 ನೇ ಕ್ರಾಸ್, ಚಿತ್ರದುರ್ಗ

ನನಗೆ ಪುಸ್ತಕ ಓದುವ ಹವ್ಯಾಸ ಬಹಳ. ಹೀಗೆ ನಮ್ಮ ಸ್ನೇಹಿತೆ ಮನೆಗೆ ಹೋದಾಗ ಮಹಾಮನೆ ಎಂಬ ಪುಸ್ತಕದಲ್ಲಿ ಪಂಡಿತ ಚನ್ನಪ್ಪ ಎರೆಸೀಮೆಯವರ ಸ್ಮರಣಾರ್ಥದ ಬಗ್ಗೆ ಓದಿದೆ. ಅವರ ಪರಿಚಯವಿದ್ದ ಕಾರಣ ಅವರ ಜೊತೆ ಕಳೆದ ಕೆಲ ಸಿಹಿ ನೆನಪುಗಳು ನೆನಪಿಗೆ ಬಂದವು. 57 ವರ್ಷಗಳ ಹಿಂದಿನ ಮಾತು. ನನಗೆ ಆಗ ಸುಮಾರು 13 ವರ್ಷ ವಯಸ್ಸು. ನಮ್ಮ ತಂದೆ ಪಟೇಲ್ ಚಂದ್ರಶೇಖರಪ್ಪ ಚಿತ್ರದುರ್ಗ ಕೆಳ ಕೋಟೆಯಲ್ಲಿ ವಾಸವಾಗಿದ್ದರು. ನಮ್ಮ ತಂದೆ ಮತ್ತು ಪಂಡಿತ ಚನ್ನಪ್ಪ ಎರೆಸೀಮೆಯವರು ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಅವರು ನಮ್ಮ ಮನೆಯ ಎದುರುಗಡೆಯ ಮನೆಯಲ್ಲಿ ವಾಸವಾಗಿದ್ದರು. ಅವರ ಶ್ರೀಮತಿ ಪಾರ್ವತಮ್ಮನವರು. ಅವರ ತಮ್ಮ ಬಸವಣ್ಣಪ್ಪನವರು ಮತ್ತು ಅವರ ಮೂವರು ಪುತ್ರಿಯರಾದ ರಾಜೇಶ್ವರಿ, ಸಂಗಮೇಶ್ವರಿ, ವನಜಾಕ್ಷಿ ಹಾಗೂ ಪುತ್ರ ಕಲಿನಾಥ ಇವರ ಜೊತೆಗಿದ್ದರು. ಇವರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದರು. ಶಾಲಾ ರಜೆ ದಿನಗಳಲ್ಲಿ ನಮ್ಮ ತಂದೆ ಜೊತೆಗೆ ಜಮೀನಿಗೆ ಬರುತ್ತಿದ್ದರು. ನಮ್ಮಗಳ ಜೊತೆ ತುಂಬಾ ತಮಾಷೆಯಾಗಿ ಮಾತನಾಡುತ್ತಿದ್ದರು. ನಮ್ಮ ಊರಿನಲ್ಲಿರುವ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪ್ರವಚನವನ್ನು ಮಾಡುತ್ತಿದ್ದರು. ಅವರು ಇಲ್ಲಿದ್ದಾಗ ‘ತೆಂಗು’ ಮತ್ತು ‘ಜೇನು’ ಎಂಬ ಪುಸ್ತಕಗಳನ್ನು ಬರೆದಿದ್ದರು. ನಂತರ ಬೆಂಗಳೂರಿಗೆ ವರ್ಗವಾಗಿ ಹೋದ ಮೇಲೆ ನಮ್ಮ ತಂದೆಯವರು ಅವರನ್ನು ಎರಡು ಬಾರಿ ಭೇಟಿ ಮಾಡಿದ್ದರಂತೆ.

ಚಿತ್ರದುರ್ಗ ಕೋಟೆಯ ಬಗ್ಗೆ ಅತ್ಯಂತ ಆಸಕ್ತರು, ಇತಿಹಾಸ ಪ್ರಾಜ್ಞರು ಆಗಿದ್ದು ಅನೇಕ ಲೇಖನಗಳನ್ನು ಬರೆದಿದ್ದರು. ಯಾವುದೇ ಜಾತಿ ಭೇದವಿಲ್ಲದೆ ವಿದ್ಯಾರ್ಥಿಗಳನ್ನು ಪ್ರೀತಿಸುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಗಟ್ಟಿಮುಟ್ಟಾದ ಆಳು, ಸ್ನೇಹಪರರು, ಸಾಹಿತ್ಯಾಭಿಮಾನಿಗಳು ಮಾತ್ರವೇ ಅಲ್ಲದೆ ಸಾಹಿತಿಗಳೂ ಆಗಿದ್ದರು. ಅವರ ಧೈರ್ಯವನ್ನು, ಅವರ ಧ್ವನಿಯಲ್ಲಿ ಕಾಣಬಹುದಿತ್ತು. ಸದಾ ಹಸನ್ಮುಖರು ಅವರು.

Share This
%d bloggers like this: