
ಪ್ರಾಚೀನ ಪರಂಪರೆಯ ಕನ್ನಡ ಪಂಡಿತ ಲೋಕದಲ್ಲಿ ಚನ್ನಪ್ಪ ಎರೆಸೀಮೆಯವರ ಹೆಸರು ಅಗ್ರಮಾನ್ಯ. ಎರೆಸೀಮೆಯವರದು ಬಹುಮುಖ ವ್ಯಕ್ತಿತ್ವ. ಅದರಲ್ಲಿ ಯಾವುದನ್ನು ಮೆಚ್ಚುವುದು? ಯಾವುದನ್ನು ಬಿಡುವುದು? ಶಿಸ್ತುಬದ್ಧವಾದ ಶಿಕ್ಷಕವೃತ್ತಿಯನ್ನೆ? ಕುಣಿದು ಕುಣಿಸುವ ಶಿವಕಥಾ ಕೀರ್ತನಾಪಟುತ್ವವನ್ನೆ? ಅಟ್ಟ ಅಲ್ಲಾಡುವ ಬಯಲಾಟವನ್ನೆ? ಮನವ ತಣಿಸುವ ಪ್ರವಚನವನ್ನೆ? ಕವಿತ್ವವನ್ನೆ? ಕಲೆಯನ್ನೆ? ಸಂಗೀತವನ್ನೆ? ಸಂಸಾರಪ್ರೇಮವನ್ನೆ? ಕುಟುಂಬಪೋಷಣೆಯನ್ನೆ? ಸ್ನೇಹಪರತೆಯನ್ನೆ? ಶಿಷ್ಯವಾತ್ಸಲ್ಯವನ್ನೆ? ಸಂಶೋಧನಾಪ್ರವೃತ್ತಿಯನ್ನೆ? ಗುರು ಜಂಗಮರಲ್ಲಿ ತೋರಿಸುತ್ತಿದ್ದ ಭಕ್ತಿಯನ್ನೆ? ಸೇವೆಯನ್ನೆ? ಮೈಮುರಿದು ಮಾಡುತ್ತಿದ್ದ ಕೃಷಿ ಕಾಯಕವನ್ನೆ? ವಿದ್ವಜ್ಜನ ಪ್ರೇಮವನ್ನೆ? ಸಿದ್ಧಿಯನ್ನೆ? ಸಾಧನೆಯನ್ನೆ? ಬದುಕಿನ ಸೊಬಗನ್ನೆ? ಸೊಗಡನ್ನೆ? ಪಂಡಿತೋಚಿತ ವೇಷಭೂಷಣವನ್ನೆ? ಒಂದೇ ಎರಡೆ? ಯಾವುದನ್ನು ಮೆಚ್ಚುವುದು? ಯಾವುದನ್ನು ಬಿಡುವುದು? ಇದು ಅವರ ಅಂತರಂಗದ ಶಿಷ್ಯನಾಗಿ ನಾನು ಕಂಡ ಅನುಭವ.
ಎತ್ತಣ ಎರೆಸೀಮೆ? ಎತ್ತಣ ಬಯಲುಸೀಮೆ? ಎತ್ತಣ ಚೆನ್ನಕೋಗಿಲೆ? ಎತ್ತಣ ಸಿದ್ಧಗಂಗಾ ಮಾಮರ? ಎತ್ತಣಿಂದೆತ್ತ ಸಂಬಂಧವಯ್ಯಾ? ಎಂಬಂತೆ ಸಂಬಂಧದ ವಸಂತ ಬಂದಾಗ ಎರೆಸೀಮೆ ಬಯಲಸೀಮೆಯೊಳು ಬೆರೆಯಿತು. ಚೆನ್ನಕೋಗಿಲೆ ಸಿದ್ಧಗಂಗಾ ಎಂಬ ಮಾಮರವನ್ನಾಶ್ರಯಿಸಿತು. ಚೂತಸಿರಿಯನ್ನಾಸ್ವಾದಿಸಿತು. ಅಂದರೆ 1944 ರಲ್ಲಿ ತುಮಕೂರಿನಲ್ಲಿ ವಿ.ಟಿ.ಸಿ. ಅಧ್ಯಯನಕ್ಕಾಗಿ ಬಂದು ನಮ್ಮ ಶ್ರೀ ಸಿದ್ಧಗಂಗಾ ಮಠದಲ್ಲಿ ಪ್ರವೇಶ ಪಡೆದು ಶ್ರೀಮಠದ ಹಳೆಯ ವಿದ್ಯಾರ್ಥಿಗಳಾದರು. ಲಿಂ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಶ್ರೀಗಳ ಬಾಲ್ಯ ಸ್ನೇಹಿತರು, ಶ್ರೀಮಠದ ಭಕ್ತರೂ ಆದ ಶ್ರೀ ಟಿ.ಎನ್. ಕೆಂಪಹೊನ್ನಯ್ಯನವರ ಅಣ್ಣ ಗಂಗಣ್ಣನ ಮಗಳಾದ ಪಾರ್ವತಮ್ಮ ಎಂಬುವರನ್ನು ವಿವಾಹವಾಗಿ ಎರೆಸೀಮೆ ಬಯಲುಸೀಮೆಯೊಂದಿಗೆ ಸಂಬಂಧ ಬೆಳೆಸಿದರು. ಇದೇ ಎತ್ತಣಿಂದೆತ್ತಣ ಸಂಬಂಧ!!
ಚನ್ನಪ್ಪ ಎರೆಸೀಮೆ ಅವರು 1944 ರಿಂದಲೂ ಲಿಂಗೈಕ್ಯರಾಗುವ ತನಕ ಶ್ರೀಮಠದ ಹಳೆಯ ವಿದ್ಯಾರ್ಥಿಗಳಲ್ಲಿ ಹಿರಿಯ ವಿದ್ಯಾರ್ಥಿಗಳಾಗಿದ್ದರು. ಶ್ರದ್ಧಾಭಕ್ತಿಯಿಂದ ಶ್ರೀಮಠದ ಸೇವೆ ಮಾಡಿದವರು. ಶ್ರೀಗಳವರ ಅಂತರಂಗದ ಭಕ್ತರಾಗಿ ಅವರ ಇಂಗಿತಜ್ಞರಾಗಿದ್ದರು. ಪರಮಪೂಜ್ಯರು ಎರೆಸೀಮೆಯವರೊಡನೆ ಅದೆಷ್ಟೋ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.
ಶ್ರೀಮಠದ ಮುಖವಾಣಿಯಾದ ‘ಸಿದ್ಧಗಂಗಾ’ ತ್ರೈಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಅವರು ಸಲ್ಲಿಸಿದ ಸೇವೆ ಅನುಪಮ. ಆ ಪತ್ರಿಕೆ ಎಷ್ಟು ಸಾಹಿತ್ತಿಕ ಮೌಲ್ಯಯುತವಾಗಿ ಬರುತ್ತಿತ್ತೆಂಬುದಕ್ಕೆ ಸಾಹಿತ್ಯ ಚರಿತ್ರೆಕಾರರಾದ ರಂ.ಶ್ರೀ. ಮುಗಳಿಯವರು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಗ್ರಂಥದಲ್ಲಿ ಈ ಪತ್ರಿಕೆಯಿಂದ ಅನೇಕಾಂಶಗಳನ್ನು ಉಲ್ಲೇಖ ಮಾಡಿರುವುದೆ ಸಾಕ್ಷಿಯಾಗಿದೆ.
ಶ್ರೀ ಶ್ರೀಗಳವರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅವರು ಸಂಪಾದಿಸಿ, ಅರ್ಪಿಸಿದ ‘ಸಿದ್ಧಗಂಗಾ ಶ್ರೀ’ ಅಭಿನಂದನಾ ಗ್ರಂಥ ರಾಜಗ್ರಂಥ. ಇದುವರೆವಿಗೆ ಅಭಿನಂದನಾ ಸ್ವರೂಪದ ಗ್ರಂಥ ಪ್ರಪಂಚದಲ್ಲಿ ಬೃಹತ್ತಿನಲ್ಲಾಗಲಿ ಮತ್ತು ಮಹತ್ತಿನಲ್ಲಾಗಲಿ ‘ಸಿದ್ಧಗಂಗಾ ಶ್ರೀ’ಯನ್ನು ಸರಿಗಟ್ಟುವ ಮತ್ತೊಂದು ಅಭಿನಂದನಾ ಗ್ರಂಥ ಹುಟ್ಟಿಬಂದಿಲ್ಲ. ತನ್ಮೂಲಕ ಎರೆಸೀಮೆಯವರು ಸಿದ್ಧಗಂಗಾ ಕ್ಷೇತ್ರ ಮತ್ತು ಗುರು ಪರಂಪರೆಯ ಇತಿಹಾಸಕ್ಕೆ ಭದ್ರ ಬುನಾದಿಯನ್ನು ಹಾಕಿದರು. ‘ಸಿದ್ಧಗಂಗಾ ಶ್ರೀ’ ಪ್ರಕಟವಾಗುವ ಪೂರ್ವದಲ್ಲಿ ಈ ಮಠದ ಮತ್ತು ಗುರು ಪರಂಪರೆಯ ಇತಿಹಾಸದ ಬಗ್ಗೆ ಅಲ್ಲೊಂದು ಇಲ್ಲೊಂದು ತುಣುಕುಗಳನ್ನು ಬಿಟ್ಟರೆ ಸಮಗ್ರವಾದ ಸಾಮಗ್ರಿ ಇರಲಿಲ್ಲ. ಆ ಕೊರತೆಯನ್ನು ನೀಗಿಸಿ ಇತಿಹಾಸದ ಮೂಲದ್ರವ್ಯವನ್ನು ಸಂಪಾದಿಸಿಕೊಟ್ಟವರು ಶ್ರೀ ಎರೆಸೀಮೆಯವರು. ನಂತರದಲ್ಲಿ ಬಂದ ಶ್ರೀಮಠ ಮತ್ತು ಶ್ರೀ ಸಾಹಿತ್ಯದ ಎಲ್ಲ ಪ್ರಕಾರದ ಗ್ರಂಥಗಳಿಗೂ ಇದು ಮೂಲ ಆಕರವಾಯಿತು.
ವಿಶೇಷವಾಗಿ ಶ್ರೀಮದುದ್ದಾನಶಿವಯೋಗಿಗಳು ಮತ್ತು ಶ್ರೀ ಶ್ರೀ ಶ್ರೀ ಶಿವಕುಮಾರಶಿವಯೋಗಿಗಳು ಈ ಉಭಯರ ದಿವ್ಯಚರಿತೆಯುಳ್ಳ “ಉದ್ದಾನೇಶ ಚರಿತೆ’ ಎಂಬ ಕಾವ್ಯವನ್ನು ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ರಚಿಸಿ ಮಹಾಕವಿಯಾಗಿದ್ದಾರೆ. ಇದರಲ್ಲಿ 18 ಸಂಧಿ (ಅಧ್ಯಾಯ) 1256 ಪದ್ಯಗಳಿವೆ. ಮೊದಲ 5 ಸಂಧಿಗಳು 364 ಪದ್ಯಗಳು ಮಾತ್ರ ಉದ್ದಾನೇಶ್ವರರ ದಿವ್ಯಚರಿತೆಯೂ ಉಳಿದ 13 ಸಂಧಿಗಳಲ್ಲಿ 892 ಪದ್ಯಗಳು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿವ್ಯಚರಿತೆಗೆ ಮೀಸಲಾಗಿದೆ.
ಎರೆಸೀಮೆ ವಿರಚಿತ ಸಾಹಿತ್ಯ ರಾಶಿ ಬಹುದೊಡ್ಡದು. ಸ್ವತಂತ್ರ ಗ್ರಂಥಗಳು 18, ಸಂಪಾದಿತ ಗ್ರಂಥಗಳು 17, ಪ್ರಬುದ್ಧ ಲೇಖನಗಳೂ 85, ಆಕಾಶವಾಣಿ ಪ್ರಸಾರ ಭಾಷಣಗಳು 18, ಒಟ್ಟು 128.
ಎರೆಸೀಮೆಯವರ ಗುರು ಜಂಗಮರ ಸಂಪರ್ಕ ಅಪಾರ. ಸಿದ್ಧಗಂಗೆಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಚಿತ್ರದುರ್ಗದ ಜಯವಿಭವ ಮಹಾಸ್ವಾಮಿಗಳು, ಹುಕ್ಕೇರಿ ಶಿವಬಸವಸ್ವಾಮಿಗಳು, ಸದ್ಧರ್ಮ ಪತ್ರಿಕೆಯ ಚೆನ್ನಮಲ್ಲಿಕಾರ್ಜುನರು, ವಿಶೇಷವಾಗಿ ಮೈಸೂರು ಅರಮನೆ ಪಂಚಗವಿಮಠಾಧ್ಯಕ್ಷರಾದ ಶ್ರೀ ಶ್ರೀ ಗೌರಿಶಂಕರಮಹಾಸ್ವಾಮಿಗಳು – ಇವರೆಲ್ಲರ ಆಶೀರ್ವಾದಕ್ಕೆ ಪಾತ್ರರಾಗಿದ್ದರು.
ಎರೆಸೀಮೆಯವರು ಮೊದಮೊದಲು ಕಷ್ಟ ಪಟ್ಟಿದ್ದರೂ ಕೊನೆಯಲ್ಲಿ ಸುಖೀ ಸಂಸಾರ ಅವರದು.
ಸಾನಂದಂ ಸದನಂ ಸುತಾಶ್ಚಸುಧಿಯಃ ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಷಿತಿರತಿಃ ಆಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮೃಷ್ಟಾನ್ನ ಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||
ಆನಂದ ತುಂಬಿದ ಮನೆ, ಬುದ್ಧಿವಂತರಾದ ಮಕ್ಕಳು, ಒಳ್ಳೆಯ ಸ್ನೇಹಿತರು, ನ್ಯಾಯಾರ್ಜಿತ ಸಂಪತ್ತು, ಹೇಳಿದ ಮಾತನ್ನು ಕೇಳುವ ಸೇವಕರು, ಪ್ರತಿದಿನ ಮನೆಯಲ್ಲಿ ಅತಿಥಿ ಸತ್ಕಾರ, ಶಿವಪೂಜೆ, ಗುರುಲಿಂಗಜಂಗಮರಿಗೆ ಅರ್ಪಣೆ, ಮೃಷ್ಟಾನ್ನದಂತಹ ಪ್ರಸಾದ ಸ್ವೀಕಾರ, ಸಜ್ಜನರ ಸಂಗ, ಇಂಥ ಗೃಹಸ್ಥಾಶ್ರಮವೇ ಶ್ರೇಷ್ಠ. ಗೃಹಸ್ಥಾಶ್ರಮಿಯೇ ಧನ್ಯ. ಇಂಥ ಸುಖ ಸಂಸಾರ ಎರೆಸೀಮೆಯವರದು. ಅವರ ಜನ್ಮಶತಮಾನೋತ್ಸವವೆಂಬುದೊಂದು ನೆಪ ಮಾತ್ರ. ತನ್ಮೂಲಕ ಅವರ ಬದುಕು ಬರೆಹವನ್ನು ಸಾರ್ಥಕಗೊಳಿಸಬೇಕೆಂಬುದು ಉದ್ದೇಶ. ಇದು ಅವರ ಮಕ್ಕಳ ಆಶಯ. ಅದನ್ನು ಯಶಸ್ವಿಯಾಗಿ ಆಗುಮಾಡಿದ್ದಾರೆ, ಅವರ ಮಕ್ಕಳು.