ಸಿದ್ಧಗಂಗೆಯ ಸಿದ್ಧಪುರುಶ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮಿಗಳವರು ವಿದ್ಯಾರ್ಥಿಗಳ ಬಾಳಿಗೆ ತಂದೆಯಾಗಿ, ತಾಯಿಯಾಗಿ, ಆಚಾರ್ಯರಾಗಿ ಬೋಧನೆ ಮಾಡಿದ್ದಾರೆ. ನಾವು ತಪ್ಪು ಮಾಡಿದಾಗ ಕಿವಿ ಹಿಂಡಿ ತಿದ್ದಿದ್ದಾರೆ. ಪೂಜ್ಯರು ಕರುಣಾಮಯಿ ಕಾರುಣ್ಯಮೂರ್ತಿ ಎಲ್ಲರ ಹೃದಯಕಮಲದಲ್ಲಿ ಆರಾಧ್ಯದೈವ ಎಲ್ಲರ ಬಾಳಿನ ಸೂರ್ಯರಾಗಿ ಬಾಳಿ ಬದುಕಿದರೆಂದು ಹರಸಿ ನಮ್ಮೆಲ್ಲರನ್ನು ಕಳಿಸಿದ್ದಾರೆ. ಲಕ್ಷಾಂತರ ಮಂದಿಗೆ ಬೆಳಕು ನೀಡಿದ್ದಾರೆ. ಮಹಾದಾಸೋಹಮೂರ್ತಿಯಾಗಿ ಕಳೆದ ೮೦ ವರ್ಷಗಳಿಂದ ಅನೇಕ ಕಠಿಣ ಸವಾಲುಗಳನ್ನು ಮೆಟ್ಟಿನಿಂತು ವಿದ್ಯಾರ್ಥಿಗಳ ರಕ್ಷಣೆ, ದೀನದಲಿತರ ಅತಿಥಿ-ಅಭ್ಯಾಗತರ ಯೋಗಕ್ಷೇಮಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರೊಂದು ಶಿವಚೇತನ. ಅವರದು ಅಪರೂಪದ ವ್ಯಕ್ತಿತ್ವ. ಪೂಜ್ಯರು ಕೇವಲ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದವರು. ಇಂಥ ಮಹಾಶಿವಯೋಗಿಗಳವರ ಕೃಪಾಶೀರ್ವಾದ ಬೆಳೆದು ಬೆಳಕು ಕಂಡ ಲಕ್ಷಾಂತರ ಹಳೆಯವಿದ್ಯಾರ್ಥಿಗಳಲ್ಲಿ ಪ್ರಾಕಾಂಡ ಪಂಡಿತರಾಗಿ, ಕವಿಯಾಗಿ, ಶ್ರೇಷ್ಠ ವಿದ್ವಾಂಸರಾಗಿ, ಹರಿಕಥೆ ಶಿವಕಥೆ ದುರೀಣರಾಗಿ, ಅಪ್ರತಿಮ ವಾಗ್ಮಿ ಮತ್ತು ಶ್ರೇಷ್ಠ ಶಿಕ್ಷಕರಾಗಿ ಬೆಳೆದವರು ಶ್ರೀಯುತ ಚನ್ನಪ್ಪ ಎರೇಸೀಮೆಯವರು.

         ಪೂಜ್ಯ ಶ್ರೀ ಶ್ರೀಗಳವರ ೫೦ನೇ ವರ್ಷದ ಪೀಠಾಧಿಕಾರ ಸುವರ್ಣಮಹೋತ್ಸವವನ್ನು ಅರ್ಥಪೂರ್ಣವಾಗಿ ಭಕ್ತಿಶ್ರದ್ಧೆಯಿಂದ ಆಚರಿಸಿ ಕೃತಾರ್ಥರಾಗಬೇಕೆಂದು ಶ್ರೀಮಠದ ಹಳೆಯ ವಿದ್ಯಾರ್ಥಿಸಂಘವು ಕಾರ್ಯಪ್ರವೃತ್ತವಾಗಿ ಸುಪ್ರಸಿದ್ಧ ಸಾಹಿತಿಗಳು ಹಾಗೂ ಕವಿಗಳು ಆಗಿದ್ದ `ಡಾ|| ಸಿದ್ಧಯ್ಯ ಪುರಾಣಿಕ’ರ ಘನ ಅಧ್ಯಕ್ಷತೆಯಲ್ಲಿ ಒಂದು ಸಂಪಾದಕ ಮಂಡಳಿಯನ್ನು ರಚಿಸಿ ಸುವರ್ಣಮಹೋತ್ಸವ ನೆನಪಿನ ಬೃಹತ್ ಸಂಭಾವನಾ ಸುವರ್ಣಸಂಪುಟವಾದ `ಸಿದ್ಧಗಂಗಾಶ್ರೀ’ ಹೆಸರಿನ ಗ್ರಂಥವನ್ನು ಹೊರತರಬೇಕೆಂದು ತೀರ್ಮಾನಿಸಿ ಈ ಕಾರ್ಯವನ್ನು ನಿರ್ವಹಿಸಲು ಶ್ರೀಮಠದ ಹಳೆಯ ವಿದ್ಯಾರ್ಥಿಯಾದ ಪಂ. ಚನ್ನಪ್ಪ ಎರೇಸೀಮೆಯವರು ಸೂಕ್ತ ವ್ಯಕ್ತಿ ಎಂದು ನಿರ್ಣಯಿಸಲಾಯಿತು. ಅದರಂತೆ ಶ್ರೀಯುತ ಪಂ. ಚನ್ನಪ್ಪ ಎರೇಸೀಮೆಯವರು `ಸಂಪಾದಕ’ರಾಗಿಯೂ ಹಾಗೂ ಶ್ರೀಮಠದ ಪರಮಭಕ್ತರು ಮತ್ತು ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀ ಟಿ.ಆರ್. ಮಹದೇವಯ್ಯನವರನ್ನು ನಿಯೋಜಿಸಲಾಯಿತು. ೫.೫ ಕೆ.ಜಿ. ತೂಕದ ಬೃಹತ್ ಗ್ರಂಥವನ್ನು ಹೊರತರಲು ಬಹುವಾಗಿ ಹೆಣಗಿದವರು ಪಂ. ಚನ್ನಪ್ಪ ಎರೇಸೀಮೆಯವರು. ಈ ಗ್ರಂಥವು ೧೦೮೩ ಪುಟಗಳನ್ನು ಹೊಂದಿದೆ.

         ನನ್ನ ಮತ್ತು ಅವರ ಸಂಪರ್ಕ ಆ ಸಂದರ್ಭದಲ್ಲಿ ಒದಗಿ ಬಂದುದು ಒಂದು ಸುಯೋಗವೇ ಸರಿ. ಆ ಕಾಲಮಾನದಲ್ಲಿ ಈಗಿನಂತೆ ಡಿ.ಟಿ.ಪಿ. ಸೌಲಭ್ಯವಿರಲಿಲ್ಲ. ಹಳೆಕಾಲದ ಮಳೆ ಜೋಡಿಸುವ ವ್ಯವಸ್ಥೆ ಇತ್ತು. ಶ್ರೀಯುತರು ವಿದ್ವಾಂಸರಿಂದ ಲೇಖನಗಳನ್ನು ಪಡೆಯಲು ಪಟ್ಟಿರುವ ಶ್ರಮ ಅವರಿಗೇ ಗೊತ್ತು. ಅನೇಕ ವೇಳೆ ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಬಲ್ಲವರಿಂದ `ಸಿದ್ಧಗಂಗಾಶ್ರೀ’ ಗೆ  ಬೇಕಾಗಿರುವ ನಿಖರವಾದ ಮಾಹಿತಿಗಳನ್ನು ಪಡೆದು ಸಂಗ್ರಹಿಸಲಾಗಿದೆ. ಕೆಲವು ಹಳ್ಳಿಗಳಿಗೆ ನಾನು ಸಹ ಕೆಲವು ಹಳ್ಳಿಗೆ ಹೋಗಿದ್ದು ನೆನಪಿನಲ್ಲಿದೆ. ಕೇವಲ ಮಾಹಿತಿಗಳನ್ನು ಸಂಗ್ರಹಿಸದೆ ಪೂಜ್ಯ ಶ್ರೀ ಶ್ರೀಗಳೀರ್ವರ ಭಾವಚಿತ್ರಗಳನ್ನು ಪಡೆಯಲಾಗಿತ್ತು. ಲೇಖನಗಳನ್ನು ವಿದ್ವಾಂಸರಿಂದ ಬರೆಸುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಲೇಖನಗಳನ್ನು ತರಿಸಿಕೊಳ್ಳಲು ಮೂರರಿಂದ ನಾಲ್ಕು ಬಾರಿ ಪತ್ರ ಬರೆದರೂ ಕಳಿಸುತ್ತಿರಲಿಲ್ಲ. ಕೊನೆಗೆ ಬೇಸರ ಪಟ್ಟುಕೊಳ್ಳದೇ ಅವರ ಮನೆಗಳಿಗೆ ತೆರಳಿ ಅವರನ್ನು ಮುಖತಃ ಭೇಟಿಮಾಡಿ ಗ್ರಂಥದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಮನವೊಲಿಸಿ ಅವರಿಂದ ಲೇಖನಗಳನ್ನು ಪಡೆಯಲಾಗುತ್ತಿತ್ತು. ಕೆಲವು ದಿವಸಗಳು ನಾನೂ ಸಹ ಅವರ ಜೊತೆಯಲ್ಲಿ ಇರುತ್ತಿದ್ದೆ. ಈ ಕೆಲಸ ಮಾಡುವಲ್ಲಿ ಸಮಾಧಾನ, ಸೈರಣೆ, ತಾಳ್ಮೆ ಬಹು ಮುಖ್ಯವಾಗಿತ್ತು. ಕೆಲವು ಸಲ ನನ್ನೊಡನೆ ನೋಡ್ರಿ ಶಿವರುದ್ರಯ್ಯನೋರೆ ಈ ಕಷ್ಟನ ಎಂದು ಹಂಚಿಕೊಳ್ಳುತ್ತಿದ್ದರು. ಲೇಖಕರನ್ನು ಮಾತನಾಡಿಸುವ ವಿಧಾನ ಮನವರಿಕೆ ಮಾಡಿಸುವ ಕ್ರಮ ನಿಜಕ್ಕೂ ಮೆಚ್ಚತಕ್ಕದ್ದು. ಇಷ್ಟಾದರೂ ಕೆಲವು ಲೇಖಕರು ಮುಖ್ಯವಾದ ಲೇಖನಗಳನ್ನು ಕಳಿಸಲಿಲ್ಲ ಎಂಬ ಕೊರಗು ಅವರಲ್ಲಿತ್ತು.

         ಎಲ್ಲಾ ಲೇಖನಗಳು ಕೈಸೇರಿದ ಮೇಲೆ ಅವುಗಳನ್ನು ಕ್ರೂಢೀಕರಿಸಿ ಮುದ್ರಣಾಲಯಕ್ಕೆ ತಲುಪಿಸಿ ಅವು ಮುದ್ರಣವಾದ ಮೇಲೆ ಅವುಗಳನ್ನು ಪ್ರೂಫ್ ನೋಡಿ ತಪ್ಪಿಲ್ಲದೇ ತಿದ್ದಿ ಪುನಃ ಅಂತಿಮವಾಗಿ ಮುದ್ರಣಾಲಯಕ್ಕೆ ಕಳಿಸುವ ಕೆಲಸ ಬಹಳ ಕಷ್ಟದಾಯಕವಾಗಿತ್ತು. ಲೇಖನಗಳನ್ನು ಜೋಡಿಸಲು ಶ್ರೀಮಠದಲ್ಲಿರುವ ಶ್ರೀ ಕೆಂಪಹೊನ್ನಯ್ಯನವರ ಅತಿಥಿಗೃಹದಲ್ಲಿ ಬಂದು ಕೊಠಡಿಯನ್ನು ಪೂಜ್ಯ ಶ್ರೀಗಳವರು ವ್ಯವಸ್ಥೆ ಮಾಡಿಕೊಟ್ಟಿದ್ದರು. ನನಗೆ ಬಿಡುವಿದ್ದಾಗ ಅವರ ಜೊತೆಯಲ್ಲಿ ಇರುತ್ತಿದ್ದೆನು. ನಾನು ಅವರ ಜೊತೆಯಲ್ಲಿದ್ದಾಗ ಅವರನ್ನು ನೋಡಲು ಪರಿಚಯಸ್ಥ ವ್ಯಕ್ತಿಗಳು ಬಂದಾಗ ನನ್ನನ್ನು ಪರಿಚಯಿಸುವ ರೀತಿ ಅನನ್ಯವಾದುದು. ನನ್ನನ್ನು ಬೆನ್ನು ತಟ್ಟಿ ನೋಡ್ರಿ ಇವರು ಹಳೆಯ ವಿದ್ಯಾರ್ಥಿಸಂಘದ ಕಾರ್ಯದರ್ಶಿ ಪಾದರದ ಪಾದರಸ ಇದ್ದ ಹಾಗೆ ಡೈನಮಿಕ್ (Dynamic) ಪರ್ಸನಾಲಟಿ ಯಾವುದೇ ಕೆಲಸವನ್ನು ವಹಿಸಿದರೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿಬಿಡುವ ಸ್ವಭಾವದವರು ಎಂಬ ಮೆಚ್ಚುಗೆಯ ಮಾತನಾಡಿ ಪ್ರೋತ್ಸಾಹಿಸುತ್ತಿದ್ದರು.

         ಶ್ರೀಯುತರ ವ್ಯಕ್ತಿತ್ವವನ್ನು ಪರಿಚಯಿಸುವುದಾದರೆ ಅವರೊಬ್ಬ ಸ್ನೇಹಜೀವಿ, ಹಾಸ್ಯ ಪ್ರದಾನ ಮಾತಿನ ಮೋಡಿಯಿಂದ ಪೂಜ್ಯ ಶ್ರೀಗಳಾದಿಯಾಗಿ ಎಲ್ಲರನ್ನು ನಗಿಸುತ್ತಿದ್ದರು. ಮಾತಿನಲ್ಲಿ ಗಟ್ಟಿಧ್ವನಿ, ಯಾವಾಗಲೂ ಹಸನ್ಮುಖಿ. ಅವರ ಉಡುಪು ಕಚ್ಚೆಪಂಚೆ, ಬಿಳಿ ಷರಟು. ಬಗಲಿಗೆ ಒಂದು ಕೈಚೀಲ, ಎಲ್ಲಿಗೆ ಹೋದರೂ ಇರಲೇಬೇಕು. ಅವರ ನಡೆನುಡಿಯಲ್ಲಿ ಸಾಮ್ಯತೆ ಇತ್ತು. ಅವರ ಎದುರಿಗೆ ಬಂದವರನ್ನು ನಗುನಗುತ್ತಲೇ ಮಾತಾನಡಿಸುವ ವೈಖರಿ ಅವರ ವಿಶೇಷ ಗುಣ. ಶ್ರೀಯುತರು ಸ್ವಲ್ಪ ಕೋಪಿಷ್ಠರು. ಅವರಿಗೆ ಕೋಪವಿತ್ತು. ಆದರೂ ಸಾತ್ವಿಕ ಕೋಪವೇ ಹೊರತು ದ್ವೇಷದ ಕೋಪವಾಗಿರಲಿಲ್ಲ. ನಾನು ಅವರ ಸ್ವಭಾವವನ್ನು ಬಲ್ಲವನಾಗಿದ್ದೆನು. `ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬಂತೆ ಅವರ ಕೋಪ ಪ್ರಸಂಗದಲ್ಲಿ ವಜ್ರದಂತೆ ಕಠೋರವಾದರೂ ಮರುಕ್ಷಣದಲ್ಲಿ ಕುಸುಮ ಸದೃಶವಾಗುತ್ತಿತ್ತು.

         ಪೂಜ್ಯ ಶ್ರೀಗಳವರು ಹಮ್ಮಿಕೊಂಡಿದ್ದ ಗ್ರಾಮಾಂತರ ಬಸವಜಯಂತಿ ಕಾರ್ಯಕ್ರಮಕ್ಕೆ ಶ್ರೀಯುತರನ್ನು ಆಹ್ವಾನಿಸುತ್ತಿದ್ದರು. ಎರೇಸೀಮೆಯವರನ್ನು ಕಂಡರೆ ಪೂಜ್ಯರಿಗೆ ಅಪಾರ ಪ್ರೀತಿ ಮತ್ತು ವಾತ್ಸಲ್ಯ. ಅವರು ಪೂಜ್ಯರನ್ನು ಕಂಡಾಗ ಯಾವಾಗ ಬಂದಿರಿ ಗ್ರಂಥದ ಕೆಲಸ ನಡೆಯುತ್ತಿದೆಯೇ ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.  ಶ್ರೀಯುತರಿಗೂ ಪೂಜ್ಯರನ್ನು ಕಂಡರೆ ಅಪಾರವಾದ ಭಕ್ತಿ. ಎರಡು ಮೂರು ಗ್ರಾಮಗಳಿಗೆ ಅವರ ಜೊತೆ ನಾನೂ ಹೋಗುತ್ತಿದ್ದೆನು. ನಾನು ಕಂಡಂತೆ ಅವರನ್ನು ನೋಡಲು ಮನೆಗೆ ಹೋದಾಗ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿ ಅನನ್ಯವಾದುದು. ಒಮ್ಮೆ ಅವರನ್ನು ನೋಡಲು ಅವರ ಮನೆಗೆ ಕುಟುಂಬ ಸಮೇತ  ಹೋಗಿದ್ದೆನು. ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡು ಯೋಗಕ್ಷೇಮವನ್ನು ವಿಚಾರಿಸಿ ನಾವು ಬೇಡ ಅಂದರೂ ತಿಂಡಿ, ಚಾ ನೀಡಿ ಬಹಳ ಸಮಯ ನಮ್ಮ ಜೊತೆಯಲ್ಲಿ ಕಳೆದು, ನಾವು ಹೊರಟಾಗ ಬಾಗಿಲವರೆವಿಗೂ ಬಂದು ನಮ್ಮನ್ನು ಬೀಳ್ಕೊಟ್ಟರು. ಆ ಅತಿಥಿ ಸತ್ಕಾರವನ್ನು ಸಹಾ ನೆನೆಯುತ್ತಿರುತ್ತೆೀನೆ. ಅವರ ವ್ಯಕ್ತಿತ್ವವನ್ನು ವರ್ಣಿಸಲು ಪದಗಳು ಸೋಲುತ್ತವೆ.

         `ಸಿದ್ಧಗಂಗಾಶ್ರೀ’ ಮಹಾಸಂಪುಟದಲ್ಲಿ ಐದು ಪ್ರತ್ಯೇಕ ವಿಭಾಗಗಳಿವೆ. ಮೊದಲನೆಯದು `‍ಕ್ಷೇತ್ರಶ್ರೀ’ ಈ ವಿಭಾಗದಲ್ಲಿ ಶ್ರೀಕ್ಷೇತ್ರದ ಸಮಗ್ರ ಇತಿಹಾಸ. ನನ್ನ ಪ್ರಕಾರ ಎಲ್ಲರ ಅನಿಸಿಕೆಯಂತೆ ಇಷ್ಟೊಂದು ಸಮಗ್ರವಾಗಿ ಈ ಹಿಂದೆ ಯಾರೂ ಬರೆದಿರುವುದಿಲ್ಲ. ಅಲ್ಲದೇ ಇದು ಪೂಜ್ಯರ ಕಾರ್ಯವೈಖರಿಗಳನ್ನು ಸಹ ಒಳಗೊಂಡಿದೆ. ಎರಡನೆಯದು `ದರ್ಶನಶ್ರೀ’ ಈ ಭಾಗದಲ್ಲಿ ವಿಶ್ವದ ಪ್ರಮುಖ ಧರ್ಮಗಳನ್ನು ಪರಿಚಯಿಸುವ ಲೇಖನಗಳು ಇದರಲ್ಲಿದೆ. ಮೂರನೆಯದು `ಸಾಹಿತ್ಯಶ್ರೀ’ ಇದರಲ್ಲಿ ನಾಡಿನ ಸಾಹಿತ್ಯ ಚರಿತ್ರೆಗೆ ವೀರಶೈವರು ಹಾಗೂ ಬೇರೆ ಬೇರೆ ಸಾಹಿತಿಗಳು ನೀಡಿರುವ ಕಾಣಿಗೆ ಏನು ಎಂಬುದು ಇದರಲ್ಲಿದೆ. ನಾಲ್ಕನೆಯದು `ಕಲಾಶ್ರೀ’ ಈ ಭಾಗದಲ್ಲಿ ವೀರಶೈವರು ಲಲಿತಕಲೆಗಳಿಗೆ ಸಲ್ಲಿಸಿದ ಸೇವೆಯ ಸಮೀಕ್ಷೆ ಇದರಲ್ಲಿದೆ. ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ `ಪೋಟೋಗಳು’ ಒಂದು ಸಂಪುಟವಾಗುವಷ್ಟಿವೆ. ಆ ಕಾಲದಲ್ಲಿ ಕಲರ್ ಪೋಟೋಗಳನ್ನು ತೆಗೆಯುವ ತಾಂತ್ರಿಕತೆ ಇಲ್ಲವಾಗಿ ಕಪ್ಪು ಬಿಳುಪು ಪೋಟೋಗಳನ್ನು ಆಕರ್ಷಿತವಾಗಿ ಹಾಕಲಾಗಿದೆ.

         ಸುವರ್ಣಮಹೋತ್ಸವವು ೧೯೮೨ರಲ್ಲಿ ಅತಿ ವಿಜೃಂಭಣೆಯಿಂದ ಜರುಗಿ ನಾಡಿನ ವಿದ್ವಾಂಸರು, ರಾಜಕಾರಣಿಗಳು, ಗಣ್ಯಮಾನ್ಯರು, ಲಕ್ಷಾಂತರ ಭಕ್ತರು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರೇಸೀಮೆಯವರಿಗೆ ಸಮಿತಿಯವರು ಸಮಾರಂಭಕ್ಕೆ ಬರುವಂತೆ ಆಹ್ವಾನವನ್ನು ನೀಡಿದ್ದರು. ಆದರೆ ಶ್ರೀಯುತರಿಗೆ ಸಮಿತಿಯವರು ಸಮಾರಂಭದಲ್ಲಿ ಸನ್ಮಾನಿಸಬಹುದು ಎಂಬ ಆಲೋಚನೆ ಇತ್ತೋ ಏನೋ ಆದ್ದರಿಂದ ಅವರು ನಮ್ಮ ಸಂಘದ ಕಾರ್ಯಾಲಯದಲ್ಲಿ ನಮ್ಮ ಜೊತೆಯಲ್ಲೇ ಇದ್ದು ಕಾರ್ಯ ಕಲಾಪಗಳನ್ನು ಧ್ವನಿವರ್ಧಕದ ಮೂಲಕ ವೀಕ್ಷಿಸುತ್ತಿದ್ದರು. ನಾವು ಕಣ್ಣಾರೇ ಕಂಡಂತಹ ದೃಶ್ಯ. ಸಾರ್ ನೀವು ಸಮಾರಂಭದಲ್ಲಿ  ಭಾಗವಹಿಸಬೇಕಾಗಿತ್ತು ಎಂದು ಮನವಿ ಮಾಡಿಕೊಂಡ ಮೇರೆಗೆ ಅವರು ಕೊಟ್ಟ ಉತ್ತರಕ್ಕೆ ನಾವು ಮೂಕವಿಸ್ಮಿತರಾದೆವು. ನಾನು ನಿಮ್ಮ ಹಾಗೆ ಒಬ್ಬ ಹಳೆಯ ವಿದ್ಯಾರ್ಥಿ. ಎಲೆಮರೆಯ ಕಾಯಿಯಂತಿರಬೇಕು ಎಂಬ ಸೌಜನ್ಯದ ಮಾತನಾಡಿದರು. ದೊಡ್ಡವರ ಬದುಕೇ ಹೀಗೆ ಶ್ರೀಯುತರದು ಶಿಸ್ತಿನ ಆದರ್ಶ ಜೀವನ.

         `ಸಿದ್ಧಗಂಗಾಶ್ರೀ’ ಗ್ರಂಥದ ನಂತರ ನೂರಾರು ಪುಸ್ತಕಗಳು ಪ್ರಕಟಗೊಂಡಿವೆ. ಆದರೆ ಸಿದ್ಧಗಂಗಾಶ್ರೀ ಗ್ರಂಥವನ್ನು ಮೀರಿಸುವ ಯಾವ ಗ್ರಂಥಗಳು ಇದುವರೆಗೆ ಪ್ರಕಟವಾಗಿರುವುದಿಲ್ಲ. ಇದು ಒಂದು ಬೃಹತ್ ಆಕರಗ್ರಂಥವಾಗಿದೆ. ಎನ್‌ಸೈಕ್ಲೋಪೀಡಿಯಾ (‌Encyclopedia) ವಿಶ್ವಕೋಶವಿದ್ದಂತೆ. ಗ್ರಂಥದಲ್ಲಿ ಸಾಹಿತ್ಯ, ಕಲೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಪರಿಚಯವನ್ನು ಮಾಡಿಕೊಟ್ಟರೆ ಓದುಗರಿಗೆ, ಸಂಶೋದಕರಿಗೆ, ಕರಾರುವಕ್ಕಾದ ಮಾಹಿತಿಗಳನ್ನು ಒದಗಿಸುತ್ತದೆ.

ಕೆ.ಹೆಚ್. ಶಿವರುದ್ರಯ್ಯ

ಕಾರ್ಯದರ್ಶಿ

ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಶ್ರೀ ಸಿದ್ಧಗಂಗಾಮಠ, ತುಮಕೂರು.

Share This
%d bloggers like this: