ಧರ್ಮನಿಷ್ಠ ಸಂಪಾದಕ – ಪಂಡಿತ ಚನ್ನಪ್ಪ ಎರೆಸೀಮೆ

ಮೊದಲಿಗೆ ವೈಯಕ್ತಿಕ ಪರಿಚಯವಿರಲಿಲ್ಲ. ಸಾಮಾನ್ಯ ಎತ್ತರದ, ಎಣ್ಣೆಗೆಂಪಿನ ಕನ್ನಡಕಧಾರಿ,  ಕಚ್ಚೆ ಪಂಚೆ, ಜುಬ್ಬ ಧರಿಸಿದ ಪರಿಶುದ್ಧ ವಸ್ತ್ರಧಾರಿ, ಪಾದರಸ ನಡಿಗೆಯ ಚಾಲೂಕು ವ್ಯಕ್ತಿತ್ವದ ಶಿಕ್ಷಕರಾಗಿದ್ದವರು ಪಂಡಿತ ಚನ್ನಪ್ಪ ಎರೆಸೀಮೆ ಅವರು. ಅವರನ್ನು ನಾನು ಕಂಡದ್ದು ಸಿದ್ಧಗಂಗಾ ಕ್ಷೇತ್ರದಲ್ಲಿ. ಶ್ರೀಕ್ಷೇತ್ರದ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವ ಸಂದರ್ಭ ಮತ್ತು ಕಾಲೇಜು ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ. ಪುಣ್ಯಕ್ಷೇತ್ರ ಸಿದ್ಧಗಂಗಾ ಮಠಕ್ಕೆ ನಾನಾ ಕಾರ್ಯ ನಿಮಿತ್ತ ಬಂದು ಹೋಗುವ ಎಲ್ಲಾ ಹಂತದ ವೃತ್ತಿಯ ಗಣ್ಯಾತಿಗಣ್ಯರ ಗಮನಿಕೆ ಎಲ್ಲರಿಗೂ ಸರ್ವೇಸಾಮಾನ್ಯ.

ಒಬ್ಬೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ, ದಿಕ್ಕಿನಲ್ಲಿ ಮಹಾ ಸಾಧಕರೆ. ಅಂತಹವರಲ್ಲಿ ಸನ್ಮಾನ್ಯ ಪಂಡಿತ ಚನ್ನಪ್ಪ ಎರೆಸೀಮೆ ಅವರು ಒಬ್ಬರು. ಶ್ರೀಕ್ಷೇತ್ರದ ವಿವಿಧ ಸನ್ನಿವೇಶ, ಸಂದರ್ಭಗಳಲ್ಲಿ ವೀಕ್ಷಿಸಿದ್ದೇನೆ. ಪ್ರಸ್ತುತ 2019 ರಲ್ಲಿ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಲಭ್ಯವಾದದ್ದು ನನ್ನ ಪುಣ್ಯ.

ಸನ್ಮಾನ್ಯ ಪಂಡಿತ ಚನ್ನಪ್ಪ ಎರೆಸೀಮೆ ಅವರ ಜೀವಮಾನ ಸಾಧನೆಗಳಲ್ಲಿ ಒಂದು ಮೇರು ಸಾಧನೆ – ವಿಶ್ವಮಾನವ, ವಿಶ್ವರತ್ನ, ಅಭಿನವ ಬಸವಣ್ಣ, ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಸಿದ್ಧಗಂಗೆಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನಾಡಿಗೆ ಸ್ವಾಮಿಗಳಾಗಿ, ಪಟ್ಟಾಧಿಕಾರವಾಗಿ ಐವತ್ತು ವರ್ಷ ಆದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪರಮಪೂಜ್ಯರಿಗೆ, ಶ್ರೀ ಸಿದ್ಧಗಂಗಾ ಮಠಕ್ಕೆ ತತ್ವಬದ್ಧವಾಗಿ, ಅರ್ಥಪೂರ್ಣವಾಗಿ ಸಂಪಾದಕರಾಗಿ ಹೊರತಂದ, ಸಲ್ಲಿಸಿದ, ಅರ್ಪಿಸಿದ ಹೊಂಗಿರಣ “ಸಿದ್ಧಗಂಗಾ ಶ್ರೀ” ಅಭಿನಂದನಾ ಗ್ರಂಥ.

ಶ್ರೀಕ್ಷೇತ್ರದ ಪರಿಸರವನ್ನು ಬಿಂಬಿಸುವ ಹೊದಿಕೆ ಪುಟಗಳಾದಿಯಾಗಿ 1232 ಪುಟಗಳ ಬೃಹತ್ ಮೌಲ್ಯವರ್ಧಕ ಕೃತಿಯ ಸಂಪಾದಕ ಮಂಡಳಿ ಅಚ್ಚುಕಟ್ಟಾಗಿ ಮುದ್ರಣ ದೋಷವಿಲ್ಲದೆ ತಯಾರಿಸಿದ್ದು, ಸಂಪಾದಕರಾಗಿ ಪಂಡಿತ ಚನ್ನಪ್ಪ ಎರೆಸೀಮೆ, ಸನ್ಮಾನ್ಯ ಪ್ರೊ. ಟಿ.ಆರ್. ಮಹಾದೇವಯ್ಯನವರು ಜವಾಬ್ದಾರಿ ವಹಿಸಿದ್ದು, ಅಧ್ಯಕ್ಷರಾಗಿ ಡಾ. ಸಿದ್ದಯ್ಯ ಪುರಾಣಿಕರು ಹಾಗೂ ಸಂಪಾದಕ ಮಂಡಳಿಯ ಸದಸ್ಯರಾಗಿ ಹತ್ತಾರು ಜನ ಕರ್ನಾಟಕದ ವಿದ್ವನ್ಮಣಿಗಳು ಸಹಕರಿಸಿದ್ದು ಒಂದು ಯೋಗಾಯೋಗವೇ ಸರಿ. ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿ ಸಂಘ ತನ್ನ ಪವಿತ್ರವಾದ ಕರ್ತವ್ಯದ ಧ್ವನಿಯಾಗಿ ಸಹಸ್ರ, ಸಹಸ್ರ ವರ್ಷಗಳ ಸಿದ್ಧಗಂಗಾ ಶಿವಯೋಗಿಗಳ ಶಿವನಿಧಿಯಾಗಿ 1981 ರಲ್ಲಿ ಲೋಕಾರ್ಪಣೆ ಮಾಡಿದೆ.

‘ಸಿದ್ಧಗಂಗಾ ಶ್ರೀ’

      1981 ರಲ್ಲಿ ಪರಮಪೂಜ್ಯ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ನಾಡಿನ ಪರವಾಗಿ, ಭಕ್ತರ ಪರವಾಗಿ ಸಲ್ಲಿಸಿದ ಅಭಿನಂದನಾ ಗ್ರಂಥ. ಕನ್ನಡ ನಾಡಿನಲ್ಲಿ ಕನ್ನಡ ನಾಡಿನ ವಿದ್ವಾಂಸರಿಗೆ, ರಾಜಕಾರಣಿಗಳಿಗೆ, ಸಮಾಜ ಸುಧಾರಕರಿಗೆ, ಧರ್ಮ ಪ್ರವರ್ತಕರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥಗಳಿಗೆ ಈ ಕೃತಿ ರಾಜ ಹಾಗೂ ತಿಲಕಪ್ರಾಯ, ಮೌಲ್ಯವರ್ಧಕ ಬೃಹತ್ ಗ್ರಂಥ, ಸುವರ್ಣ ಮೇರು. ಈ ಸಂಪುಟವನ್ನು ಸರಿಗಟ್ಟುವ ಮತ್ತೊಂದು ಅಭಿನಂದನಾ ಗ್ರಂಥ ಬಂದಿಲ್ಲವೆಂದು ವಿದ್ವಾಂಸರು ಕೊಂಡಾಡುತ್ತಾರೆ. ಈ ಗ್ರಂಥದ ಒಳಪುಟಗಳ ಅಂತರಂಗವನ್ನು ಅವಲೋಕಿಸಿದ, ದರ್ಶಿಸಿದ ದಾರ್ಶನಿಕರ, ವಿದ್ವಾಂಸರ, ಮಹಾತ್ಮರ, ಕವಿಗಳ, ಅಧ್ಯಯನಶೀಲರ ಸಂವೇದನೆಯನ್ನು ಓದಿ, ಕೇಳಿ ಡಾ. ಶ್ರೀ ಶ್ರೀ ಯವರ ಕ್ಷೇತ್ರದ ಮಹತ್ ಬೃಹತ್ತನ್ನು ತಬ್ಬಬೇಕು, ತುಂಬಿ ಕುಡಿಯಬೇಕು. ‘ಸಿದ್ಧಗಂಗಾ ಶ್ರೀ’ ಗ್ರಂಥವನ್ನು ಅವಲೋಕಿಸುವುದು ಅಧ್ಯಯನಶೀಲರಿಗೆ ಧರ್ಮ ಮತ್ತು ಕರ್ತವ್ಯ ಎಂಬಂತಿದೆ.

ಸಿದ್ಧಗಂಗಾ ಕ್ಷೇತ್ರ

ಸನ್ಮಾನ್ಯ ಪಂಡಿತ ಚನ್ನಪ್ಪ ಎರೆಸೀಮೆ ಅವರ ಲೇಖನವೇ ಕೃತಿಗೆ ನಾಂದಿ ಧ್ವನಿಯಾಗಿದೆ. ಕ್ಷೇತ್ರದ ಪರಿಸರ-ಇತಿಹಾಸವನ್ನು ಕುರಿತು ಲೇಖನ ಪ್ರಾರಂಭವಾಗಿದೆ. ‘ಸರ್ವೇ ಜನಾಃ ಸುಖಿನೋಭವಂತು’ ಎಂಬ ಆರ್ಯೋಕ್ತಿಯಂತೆ ‘ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ’ ಶರಣರ ವಾಣಿಯನ್ನು ತಲೆ ಮೇಲೆ ಹೊತ್ತು ಸಾಗಿದ ಪವಿತ್ರ ಕಾರ್ಯಸಿದ್ಧಿಯೇ ಸಿದ್ಧಗಂಗಾ ಶಿವಯೋಗಿಗಳ ಪರಂಪರೆಯ ಶಿವಪಥವಾಗಿದೆ. “ಶ್ರೀಮಠದ ಅಭಿವೃದ್ಧಿ, ಲೋಕೋದ್ಧಾರ ಕಾರ್ಯ, ಸರ್ವ ಜನಾಂಗದ ಸೇವೆಗೆ ಪರ್ಯಾಯವಾಗಿ ಶ್ರೀ ಸಿದ್ಧಗಂಗಾ ಮಠ, ಕ್ಷೇತ್ರ ಎಂದರೆ ಸಾಕು.” ಮಠದ ಪರಂಪರೆ – ಹನ್ನೆರಡನೇ ಶತಮಾನದಿಂದಲೂ ಪ್ರಾರಂಭವಾಗಿದೆ. ಶರಣರು ನಡೆದಾಡಿದ ಶಿವಪಥದ ತಪಸ್ಸು ಮಾಡಿದ ಗುರುತುಗಳು, ಪರಿಸರ-ಅವುಗಳ ಇತಿಹಾಸ ಲೇಖನದಲ್ಲಿ ಉಕ್ತವಾಗಿವೆ. ಸ್ಥಳಗಳೆಲ್ಲ ಅವಿಮುಕ್ತ ಕ್ಷೇತ್ರಗಳಾಗಿವೆ. ತುಮಕೂರು ಜಿಲ್ಲೆ, ಬೆಂಗಳೂರು ಜಿಲ್ಲೆಯ ಅನೇಕ ಸ್ಥಳ-ಬೆಟ್ಟ ಗುಡ್ಡಗಳು ಸಿದ್ಧರ ತಪೋಕೇಂದ್ರಗಳಾಗಿವೆ. ಗೋಸಲ ಸಿದ್ಧೇಶ್ವರರ, ತೋಂಟದ ಸಿದ್ಧಲಿಂಗೇಶ್ವರ, ಗೋಸಲ ಚನ್ನಬಸವೇಶ್ವರರ, ಅಟವೀಶ್ವರರ, ಉದ್ದಾನ ಶಿವಯೋಗಿಗಳ ಪವಾಡ ಸದೃಶ ಚಿಂತನೆ, ಸ್ವಭಾವ, ಕಾರ್ಯಸಿದ್ಧಿಗಳ ಬಗ್ಗೆ ಸುದೀರ್ಘವಾದ ಅನುಭವ-ಅನುಭಾವಗಳನ್ನು ಹಿಡಿದಿಟ್ಟಿದ್ದಾರೆ. ಉದ್ದಾನೇಶ್ವರರ ಬಗ್ಗೆ ಎರೆಸೀಮೆ ಹಾಗೂ ಡಾ. ಜಿ. ಮರುಳಸಿದ್ದಯ್ಯನವರು ಸ್ವಾಮಿಗಳ ಊಧ್ರ್ವಮುಖಿ ಶಿವಶಕ್ತಿಯನ್ನು, ಶಿವಮಿಂಚನ್ನು ಪ್ರಕಾಶಿಸಿದ್ದಾರೆ. ಲಕ್ಕೂರಿನ ರುದ್ರಪ್ಪ ಉದ್ದಾನೇಶ್ವರರಾಗಿ ಸಿದ್ಧಗಂಗಾ ಮಠವನ್ನು ಅಟವೀಶ್ವರರ ಅವ್ಯಕ್ತ ಶಿವಶಕ್ತಿಯಿಂದ ಮಾರ್ದನಿಗೊಳಿಸಿದ ಸಿದ್ಧಗಂಗಾ ಶಕ್ತಿ ಸಂಚರಿಸುತ್ತಿದೆ. ಶಿವಗಂಗಾ ಕ್ಷೇತ್ರದ ಬಗ್ಗೆ     ಪ್ರೊ. ಟಿ.ಆರ್. ಮಹಾದೇವಯ್ಯನವರ ‘ಗಂಗಾಧರೇಶ್ವರರ ಶಿವವಾಣಿ’ ಇದೆ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ವಭಾವ, ಜೀವನದ ಪ್ರಮುಖ ಘಟನೆಗಳು, ಅವರ ಭಾವ, ಶ್ರೀವಾಣಿ, ಅವರ ವಿವಿಧ ಲೇಖನಗಳು, ಶ್ರೀಕ್ಷೇತ್ರದಲ್ಲಿ ನಡೆದ ಸಭೆ, ಸಮ್ಮೇಳನ, ಸಮಾರಂಭ, ಹಳೆಯ ವಿದ್ಯಾರ್ಥಿಗಳ ಸಂಘದ ಸ್ವರೂಪ, ಶ್ರೀಕ್ಷೇತ್ರದಲ್ಲಿ ಅಂದಿನ ವಿದ್ಯಾಸಂಸ್ಥೆಗಳ ಕಾರ್ಯಸಾಧನೆ, ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ, ಜಾತ್ರೆಯ ಮಹತ್ವ, ವಿದ್ಯಾರ್ಥಿಗಳ ಪಾತ್ರ ಧನಾತ್ಮಕವಾಗಿ ಚೆಲ್ಲುವರೆದಿವೆ. ನಾಡಿನ ಎಲ್ಲಾ ಹಂತದ,  ವರ್ಗದ ವಿದ್ವಾಂಸರ ಅನಿಸಿಕೆಗಳು ಕವಿಕಾಣಿಕೆಯಲ್ಲಿ ಹಿಡಿದಿಟ್ಟ ಮಠವನ್ನು, ದಾಸೋಹವನ್ನು, ಕಾರ್ಯಕ್ರಮಗಳನ್ನು, ಪರಮಪೂಜ್ಯರ ದಿವ್ಯಸಾನಿಧ್ಯದ ಅಚ್ಚರಿಯನ್ನು, ಬೆರಗನ್ನು, ಮಾನವ ಧರ್ಮದ ವಿರಾಟ್ ರೂಪವನ್ನು ಭಾವನಾತ್ಮಕವಾಗಿ, ಕಾವ್ಯಾತ್ಮಕವಾಗಿ ಒಂದೊಂದು ರಸದಾಣಗಳಾಗಿ ಪಡಿನುಡಿದಿದ್ದಾರೆ. ಶ್ರೀಕ್ಷೇತ್ರದ ಅಭಿಮಾನಿಗಳು, ಭಕ್ತರು, ಶ್ರೀ ಸಿದ್ಧಗಂಗೆಯ ಕಾರ್ಯದಲ್ಲಿ ಶ್ರೀಗಂಧ ತೇದಿದಂತೆ ತಮ್ಮ ಬದುಕನ್ನು ಅರ್ಪಿಸಿಕೊಂಡ ಕ್ರಿಯಾಶೀಲ ಕಾರ್ಯಗಳಲ್ಲಿ ಅರ್ಥವಂತಿಕೆಯನ್ನು ಕಂಡುಂಡ ಅಧಿಕಾರಿ ವರ್ಗ ತಮ್ಮ ತಮ್ಮ ಅನುಭವ-ಅನುಭಾವಗಳನ್ನು ಅಭಿವ್ಯಕ್ತಿಸಿದ್ದಾರೆ.

‘ದರ್ಶನ ಶ್ರೀ’

ಈ ವಿಭಾಗದಲ್ಲಿ ದೇಹ, ಆತ್ಮ, ಪರಮಾತ್ಮ, ಪ್ರಕೃತಿ, ಪಂಚಭೂತಗಳ ವಿಶ್ವ ದರ್ಶನ, ವಿವಿಧ ನಂಬಿಕೆ, ಸಿದ್ಧಾಂತ, ತತ್ವಗಳ ಅನುಶೀಲನೆ – ಇತ್ಯಾದಿ ವಿಷಯಗಳನ್ನು ಪ್ರಾಚೀನದಿಂದ ಅರ್ವಾಚೀನದವರೆಗೆ ತಮಗೆ ಹೊಳೆದ ಹೊಳಹುಗಳೊಂದಿಗೆ ಸಮರ್ಪಿಸಿದ್ದಾರೆ. ಅವುಗಳನ್ನು ಬೃಹತ್ ಕೃತಿಗಳ ಮೂಲಕ ದ್ವೈತ, ಅದ್ವೈತ, ದರ್ಶನ, ಪಂಥ, ವೇದಾಂತ, ವಚನ, ದಾಸ ಪರಂಪರೆ, ಸಿದ್ಧಾಂತಗಳನ್ನಾಗಿಸಿದ್ದಾರೆ. ವಿಶ್ವದ ಅನೇಕತೆಯಲ್ಲಿ ಏಕತೆ ಎಂಬ ಮಾನವ ಸಿದ್ಧಾಂತವನ್ನು ಕಂಡಿದ್ದಾರೆ. ಈ ವಿಶ್ವದ ಸಾರಾಸಾರತೆಯನ್ನು ವೀರಶೈವ ಲಿಂಗಾಯತ, ಹಿಂದೂ ಧರ್ಮ, ಥಿಯಾಸಫಿ (ಬ್ರಹ್ಮವಿದ್ಯೆ), ಜೈನ, ಬೌದ್ಧ, ಕ್ರೈಸ್ತ, ಮುಸಲ್ಮಾನ, ಶೈವ ಇತ್ಯಾದಿ ಹತ್ತಾರು ಜನಸಮುದಾಯಗಳು ಬದುಕುತ್ತಿರುವುದು ‘ದೇವನೊಬ್ಬ ನಾಮ ಹಲವು’ ಎಂಬ ನಂಬಿಕೆಯಡಿಯಲ್ಲಿ. ವಿಶ್ವದ ಎಲ್ಲಾ ಧರ್ಮಗಳ ಉಗಮ-ವಿಕಾಸದ ಕಾಣ್ಕೆಯಲ್ಲಿ, ಚೌಷಷ್ಠಿ ಶೀಲಗಳ, ಜೀವನದ ವಿಮೋಚನೆಯಲ್ಲಿ, ಒಡಂಬಡಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಹನ್ನೆರಡನೇ ಶತಮಾನದ ಶರಣರ ದಿವ್ಯ ಜೀವನದ ದರ್ಶನ ಕಥಾರೂಪದಲ್ಲಿ ವ್ಯಕ್ತವಾಗಿದೆ. ನಾಡಿನ, ಅಂತರಾಷ್ಟ್ರೀಯ ಮಟ್ಟದ ಚಿಂತಕರು, ವೇದಾಂತಿಗಳು, ಸಾಹಿತಿಗಳು, ಜಿಜ್ಞಾಸುಗಳು ಕೃತಿಯ ಲೇಖಕರಾಗಿರುವುದು ‘ಸಿದ್ಧಗಂಗಾ ಶ್ರೀ’ ಯ ಹೆಗ್ಗಳಿಕೆಗೆ ಇಮ್ಮಡಿಯಾಗಿದೆ.

ಮೂರನೆಯ ಕಲಾವಿಭಾಗದಲ್ಲಿ ವೀರಶೈವ ನಾಟಕ ಸಾಹಿತ್ಯ, ನಾಟಕ ಕಲೆ, ಚಲನಚಿತ್ರೋದ್ಯಮ, ಸಂಗೀತ, ಶಿವಶರಣರ ಪ್ರವಚನಗಳಲ್ಲಿ ವ್ಯಕ್ತವಾಗಿರುವ ಕೌಶಲ್ಯ, ಪ್ರತಿಭೆ, ಆಸಕ್ತಿ ಇತ್ಯಾದಿಗಳು ವೀರಶೈವ ಸಾಹಿತಿಗಳು ನೀಡಿರುವ ಕೊಡುಗೆಯಾಗಿವೆ.

ಕೃತಿಯ ಹೆಗ್ಗಳಿಕೆ

ಸಿದ್ಧಗಂಗಾಶ್ರೀ ಅಭಿನಂದನಾ ಗ್ರಂಥದ ವಿಷಯಾನುಕ್ರಮಣಿಯಲ್ಲಿ ಬರುವ ವಿಷಯ ವಿಭಜನೆಯ – ಕ್ಷೇತ್ರಶ್ರೀ, ದರ್ಶನಶ್ರೀ, ಸಾಹಿತ್ಯಶ್ರೀ, ಕಲಾಶ್ರೀ, ಭಾಗಗಳ ವಿಷಯಗಳಲ್ಲಿ, ಹದಿನೈದರಿಂದ ಇಪ್ಪತ್ತು ಮಹಾಪ್ರಬಂಧ (Ph.ಆ.) ಗಳಿಗಾಗುವಷ್ಟು ಪ್ರೌಢ ವಿಚಾರಗಳಿವೆ ಮತ್ತು ಆಕರಗಳಿವೆ. ಈ ಕೃತಿಯಲ್ಲಿ ಬರುವ ಒಂದೊಂದು ವಿಷಯಗಳು ಸಾರ್ವಕಾಲಿಕ ಅಧ್ಯಯನಶೀಲ, ಚಾರಿತ್ರಿಕ ಸಂಗತಿಯಾಗಿದ್ದು, ಆಸಕ್ತ ಅಧ್ಯಯನಶೀಲರಿಗೆ, ಧರ್ಮಾಭಿಮಾನಿಗಳಿಗೆ, ಸಾಮಾಜಿಕ ಚಿಂತಕರಿಗೆ ಆಡುಂಬಲವಾಗಿವೆ. ಈ ಸುಮೇರು ಗ್ರಂಥ ನಮ್ಮೆಲ್ಲರ ಆತ್ಮಶಕ್ತಿ ವೃದ್ಧಿಸುವ ಸ್ಫೂರ್ತಿ ಚಿಲುಮೆಯಾಗಿದೆ.

ಸಾಹಿತಿಗಳೂ, ಶಿಕ್ಷಕರೂ, ಪ್ರವಚನಕಾರರೂ, ಆಡಳಿತಗಾರರೂ ಆಗಿದ್ದ ಸನ್ಮಾನ್ಯ ಪಂಡಿತ ಚನ್ನಪ್ಪ ಎರೆಸೀಮೆ ಅವರು ‘ಸಿದ್ಧಗಂಗಾ ಶ್ರೀ’ ಕೃತಿಗೆ ಸಂಪಾದಕರಾಗಿ ಪಟ್ಟಿರುವ ಶ್ರಮ, ಶ್ರದ್ಧೆ, ಶ್ರೀಕ್ಷೇತ್ರದ ಬಗ್ಗೆ ಇಟ್ಟಿದ್ದ ನಿಷ್ಠೆ, ಭಕ್ತಿ ಸಾರ್ವಕಾಲಿಕವಾಗಿ ನಿಲ್ಲುವ ತೋರ್ಗಂಭವಾಗಿದೆ.

Share This
%d bloggers like this: