ನೂರುವರ್ಷವೂ ಚಿರಸ್ಕರಣೀಯವಾಗೆಲ್ಲರ ಚಿತ್ರಗಳಲ್ಲಿ ಚಿರವಾಗುಳಿದಿರುವ ಗುರುದೇವರಿಗೆ ನನ್ನ ನಮನಗಳು.
“ನಮ್ಮೂರು ಚಿತ್ರದುರ್ಗ” ಎಂಬ ವಿಷಯದ ಬಗ್ಗೆ ಪ್ರಬಂಧ ಒಂದನ್ನು ವಿರಚಿಸಿ ವಾಚಿಸುವ ಸ್ಪರ್ಧೆಯನ್ನು, ಚಿತ್ರದುರ್ಗದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ; 1960-61ರ ಸಾಲಿನಲ್ಲಿ ಏರ್ಪಡಿಸಲಾಗಿತ್ತು. ಆಯ್ಕೆ ಆದ ವಿದ್ಯಾರ್ಥಿಗೆ, ಬೆಂಗಳೂರಿನ ಆಕಾಶವಾಣಿಯಲ್ಲಿ ಮಾತನಾಡುವ ಸೌಭಾಗ್ಯ!
ಪಂಡಿತ ಚನ್ನಪ್ಪ ಎರೇಸೀಮೆಯವರು ಕನ್ನಡ ಪಂಡಿತರಾಗಿ ಅದೇ ಪ್ರೌಡಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ತಲೆಗೊಂದು ಟೋಪಿ, ಕಚ್ಚೆ ಪಂಚೆ, ಕೋಟುಧರಿಸಿ ಸೇವೆಗೆ ಹಾಜರಾಗುತ್ತಿದ್ದರು. ಅವರದು ಕೃಷ್ಣವರ್ಣ ಆದರೂ ಆಕರ್ಷಕ ಮೈಕಟ್ಟು. ಹೊಳಪಿನ ಕಣ್ಣುಗಳು ಆತ್ಮೀಯ ನಗು ತಿದ್ದಿತೀಡಿದ ಮುಖಲಕ್ಷಣ. ಕಂಚಿನ ಕಂಠ ಅವರದಾದರೂ ಪಾಠ ಪ್ರವಚನಗಳು ಶಿಷ್ಠರ ಹೃದಯಗಳನ್ನು ಹೊಕ್ಕು ಮಿದುಳಲ್ಲಿ ಚಿರನೆನಪಾಗುಳಿದು ಬಿಡುತ್ತಿತ್ತು. ಅವರು ಪಂಡಿತರು ಮಾತ್ರವಲ್ಲ ಉತ್ತಮ ಲೇಖಕರು ಅತ್ಯುತ್ತಮ ಭಾಷಣಗಾರರು ಆಗಿದ್ದರು.
ಶಿಷ್ಠರೆಲ್ಲರನ್ನು ಸಮಾನವಾಗಿ ಕಾಣುತ್ತ ಅವರುಗಳ ಹೃದಯಗಳಿಗೆ ಹತ್ತಿರವಾಗಿದ್ದರು. ಶಿಷ್ಕರುಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳಸುವ ಮೇಲು ಗುಣವುಳ್ಳವರು ಅವರಾಗಿದ್ದರು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಅವರೇ ಅಯೋಜಿಸುತ್ತಿದ್ದರು. ಹಾಗಾಗಿ ಈ ಪ್ರಬಂಧ ಸ್ಪರ್ಧೆಯ ನೇತೃತ್ವವನ್ನು ಅವರಿಗೇ ನೀಡಲಾಗಿತ್ತು
ನಾನಾಗ ಹಾಸನ ಜಿಲ್ಲೆಯ ಅರಸೀಕೆರೆಯಿಂದ ಚಿತ್ರದುರ್ಗಕ್ಕೆ ಬಂದು, SSLC ತರಗತಿಗೆ ಸೇರಿದ್ದ ವಿದ್ಯಾರ್ಥಿಯಾಗಿದ್ದೆ. ಅಂತರ ಪ್ರೌಢ ಶಾಲೆಯ ಚರ್ಚಾ ಸ್ಪರ್ಧೆಗಳಲ್ಲಿ ಅರಸೀಕೆರೆ, ಚನ್ನರಾಯ ಪಟ್ಟಣ, ಹಾಸನ ಮುಂತಾದ ಕಡೆಗಳಲ್ಲಿ ಭಾಗವಹಿಸಿ ಬಹುಮಾನ ಪ್ರಶಸ್ತಿಗಳಿಸಿದ್ದೆ. ನಾಟಕಗಳಲ್ಲಿ ಸ್ಕೀ ಪಾತ್ರ ವಹಿಸಿ ಹೆಸರುಗಳಿಸಿದ್ದೆ. ತಿಪಟೂರಿನಲ್ಲಿ ಅಖಿಲ ಕರ್ನಾಟಕ ಡ್ರಾಮ ಡ್ಯಾನ್ಸ್ ಮ್ಯೂಸಿಕ್ ಕಾಂಪಿಟೇಷನ್‌ನಲ್ಲೂ ಕೂಡ ಬಹುಮಾನಗಳಿಸಿ. ಅರಸೀಕೆರೆಯ ಫ್ರೌಡಶಾಲೆಗೆ ಕೀರ್ತಿತಂದಿದ್ದೆ.
ಅದೇ ಹುರುಪು ಹುಮ್ಮಸಿನಿಂದ ಚಿತ್ರದುರ್ಗದ ಪ್ರೌಢಶಾಲೆಯ SSLC ವಿದ್ಯಾರ್ಥಿಯಾಗಿ. ಎಲ್ಲರ ಪರಿಚಯ ಪ್ರೀತಿಗಳಿಸಿದ್ದೆ. ಯಾವುದೇ ಸಾಂಸ್ಕೃತಿಕ ಚಟುವಟಿಕೆಯಾಗಿರಲಿ ನನ್ನ ಹೆಸರನ್ನು ನೊಂದಾಯಿಸಿ ಪ್ರದರ್ಶನ ನೀಡಿ ಮೆಚ್ಚಿಗೆ ಪಡೆದು ಏನಾದರೂ ಬಂದು ಬಹುಮಾನ ಪಡೆದು ಬಂದು ಬಿಡುತ್ತಿದ್ದೆ. ಆ ಒಂದು ಹುರುಪು ಉತ್ಸಾಹ ಉಲ್ಲಾಸ ಭರಿತನಾಗಿಯೇ ನಾನೂ ನನ್ನ ಹೆಸರನ್ನು ಪ್ರಬಂಧ ಸ್ಪರ್ಧೆಗೆ ನೊಂದಾಯಿಸಿದ್ದೆ. ತಮ್ಮಗಳ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದ ಇತರೆ ಮಿತ್ರ ವಿದ್ಯಾರ್ಥಿಗಳೂ ಕೂಡ ಪ್ರತಿಭಾನ್ವಿತರುಗಳೇ ಆಗಿದ್ದರು. ಮೇಲಾಗಿ ಚಿತ್ರದುರ್ಗದವರೇ ಆಗಿದ್ದು ಅಷ್ಟಿಷ್ಟು ಇತಿಹಾಸ ಬಲ್ಲವರಾಗಿದ್ದರು. ಇಲ್ಲವೆ. ಬಲ್ಲ ಹಿರಿಯರಿಂದ ತಿಳಿದು ಕೊಂಡವರಾಗಿದ್ದರು.
ನಾನೋ ಚಿತ್ರದುರ್ಗಕ್ಕೆ ಹೊಸಬ. ಇತಿಹಾಸ ಬಲ್ಲವನಲ್ಲ. ನಾನೊಬ್ಬ ಭಾವ ಜೀವಿ ಬರೀ ಗಿಡಮರಗಳನ್ನು ಬಳುಕುವ ಬಳ್ಳಿಗಳನ್ನು ಹೂಗಿಡಗಳನ್ನು, ಏಳುಸುತ್ತಿನ ಕೋಟೆಯ ಮೇಲೇರಿ ಬರುತಿದ್ದ ಉದಯ ಸೂರ್ಯವನ್ನು. ಜೋಳಗುಡ್ಡದ ಮೇಲಿಂದಿಳಿದುಮರೆಯಾಗುತ್ತಿದ್ದ ರವಿಯರಂಗನ್ನು ರಮಿಸಿ ನನಗನ್ನಿಸಿದ್ದನ್ನು ಗೀಚಾಡುವ ಗೀಳು ನನ್ನದು. ಹಾಗಾಗಿ ನಾನೂ ಒಂದು ಪ್ರಬಂಧ ರಚಿಸಿಕೊಂಡಿದ್ದೆ.
“ನಮ್ಮೂರು ಚಿತ್ರದುರ್ಗ”
ಪಂಡಿತ ಚನ್ನಪ್ಪ ಎರೇಸೀಮೆ ಇವರ ಅಧ್ಯಕ್ಷತೆಯಲ್ಲಿ ಸ್ಪರ್ಧೆ ಆರಂಭವಾಯಿತು ವೇದಿಕೆಯ ಮೇಲೆ ಮತ್ತಿಬ್ಬರು ಶಿಕ್ಷಕರು ಅವರೊಂದಿಗೆ ವಿರಾಜಿಸಿದ್ದರು. ಸ್ಪರ್ಧಿಗಳು ಒಬ್ಬೊಬ್ಬರಾಗಿ ಹೆಸರು ಕರೆದಂತೆಲ್ಲ ವೇದಿಕೆಯ ಮೆಲೇರಿ ನಿಂತು ಅತ್ಯಂತ ಉತ್ಸಾಹ ಭರಿತರಾಗಿ ವಾಚಿಸಿ. ಕೆಳಗಿಳಿಯುತ್ತಿದ್ದರು. ಆಗ ಎದ್ಯಾರ್ಥಿಗಳಿಂದ ಚಪ್ಪಾಳೆಯ ಸುರಿಮಳೆಯಾಗುತ್ತಿತ್ತು. . ಸಭೆ ಸಂತೋಷದಿಂದ ಸಂಭ್ರಮಿಸಿತ್ತು. ತಿಮ್ಮರಾಜು ಟಿ.ಕೆ., ಲಕ್ಷ್ಮಿನರಸಿಂಹ ಬಾಬು ಮತ್ತು ಕೆಲವು ಎದ್ಯಾರ್ಥಿ ಸ್ಪರ್ಧಿಗಳು ಸೊಗಸಾಗಿ ಅರ್ಥಗರ್ಭಿತವಾಗಿಯೇ ವಾಚಿಸಿದರು. ಪಂಡಿತರು ಅವರೆಲ್ಲರ ವಾಚನಗಳನ್ನು ಗಮನವಿಟ್ಟು ಕೊನೆಯತನಕ ಆಲಿಸುತ್ತಿದ್ದರು.
ನನ್ನ ಸರದಿ ಬಂತು. ನಾನು ವೇದಿಕೆಯೇರಿ ನಿಂತೆ. ಸಹಜವಾದ ಹುರುಪು ನನ್ನೊಳಗೆ ಹೊರ ಹೊಮ್ಮಿತು.
“ಬೆಟ್ಟ ಗುಡ್ಡಗಳ ಸಾಲುಗಳಿಂದ ಸಾಲಂಕೃತವಾಗಿ ಸುತ್ತುವರಿದು ಕಂಗೊಳಿಸುತ್ತಿರುವ ನಮ್ಮೂರು ಚತ್ರದುರ್ಗ.’ ಎಂದು ನನ್ನ ವಾಚನವನ್ನು ಆರಂಭಿಸಿದೆ.. ನಾಲ್ಕಾರು ಸಾಲುಗಳನ್ನು ವಾಚಿಸಿರ ಬಹುದು.
“ಟನ್! ಟನ್! ಟನ್!’ ಎಂದು ಪಂಡಿತ ಚನ್ನಪ್ಪ ಎರೇಸೀಮೆ ಅವರು ವಾಚನವನ್ನು ನಿಲ್ಲಿಸುವಂತೆ ಸೂಚಿಸಿದರು. ಬಂಡೆಯಂತೆ ಇದ್ದ ನನ್ನ ಉತ್ಸಾಹ ಅವಮಾನ ನಾಚಿಕೆಯಿಂದ ಮಂಜಿನ ಗೆಡ್ಡೆಯಂತೆ ಕರಗಿ ನೀರಾಗಿ ಹರಿದು ಹೋಯಿತು. ಅದಕ್ಕೆ ಸಾಕ್ಷಿಯಾಗಿ ನಾನುಬೆವತು ಹೋದೆ. ಕಣ್ತುಂಬ ನೀರು ತುಂಬಿಕೊಂಡು ಪಾತಾಳಕ್ಕೆ ಇಳಿಯುವಂತೆ ವೇದಿಕೆಯಿಂದ ಕೆಳಗಿಳಿದು ಬಂದೆ. ಅಂದು ರಾತ್ರಿಯೆಲ್ಲ ನಿದ್ದೆಯೇ ಇಲ್ಲ.
ಅಪಮಾನ..! ಅಪಮಾನ..!
ಮರುದಿನ ಶಾಲೆಗೆ ಹೋಗುವ ಮನಸ್ಸು ನನಗಿಲ್ಲ. ಆದರೂ ಹೋಗಲೇ ಬೇಕಲ್ಲ. ಹೋದೆ. ನೋಟೀಸ್ ಬೋರ್ಡ್ ಹತ್ತಿರ ವಿದ್ಯಾರ್ಥಿಗಳ ಗುಂಪೇ ಸೇರಿ ಗದ್ದಲ ಮಾಡುತ್ತಾ ಕೂಗಾಡುತ್ತಿರುವುದನ್ನು ಕಂಡು ಬೆಚ್ಚಿ ಬೆರಗಾದೆ.
“ಪಂಡಿತರಿಂದ ನಮಗೆ ಅನ್ಯಾಯವಾಗಿದೆ. ಅವರ ಆಯ್ಕೆಗೆ ನಮ್ಮ ವಿರುದ್ಧವಿದೆ. ನಾವು ಅವರ ಆಯ್ಕೆಯನ್ನ ಒಪ್ಪುವುದಿಲ್ಲ” ಎಂದು ಒಂದೇ ಸಮನೆ ಕೂಗಾಡುತ್ತ ಆರ್ಭಟಿಸುತ್ತಿದ್ದರು. ಕಷ್ಟಪಟ್ಟು ಬರೆದು ಕೊಂಡು ಬಂದು ಗೆಲುವಿನ ವಿಶ್ವಾಸದಿಂದಲೇ ಸ್ಪರ್ಧಿಸಿದ್ದ ಮಿತ್ರರೆಲ್ಲರೂ ಹತಾಶರಾಗಿದ್ದರು. ತಿಮ್ಮರಾಜು ಮತ್ತು ಲಕ್ಷ್ಮೀನರಸಿಂಹ ಬಾಬು ಇವರದ್ದೇ ಹೆಚ್ಚಿನ ರೋಷದ ಆವೇಷದ ಕೂಗಾಟಗಳಾಗಿದ್ದವು.
“ಪ್ಲೋಮಿನ್ದಾಸ್ , ನೀನು ಸೆಲೆಕ್ಟಾಗಿರುವೆ!” ಎಂದು ಹುಡುಗರ ನಡುವೆಯಿಂದ ಯಾರದೋ ಕೂಗು ಕೇಳಿ ಬಂತು. ನನ್ನ ಕಿವಿಯನ್ನು ನಾನು ನಂಬಲಾಗಲಿಲ್ಲ. ಆದರೂ ಅದು ನಿಜವೇ ಆಗಿತ್ತು. ನೋಟೀಸ್ ಬೋರ್ಡ್‌ನಲ್ಲಿ ನನ್ನ ಹೆಸರು ವಿರಾಜಿಸಿತ್ತು. ನನ್ನ ಮೈಮೇಲೆ ಹೂಮಳೆ ಸುರಿದಂತಾಯಿತು. ಆಯ್ಕೆ ಆಗದವರು ಕೆಂಗಣ್ಣಿನಿಂದ ನನ್ನನ್ನು ನೋಡುತಿದ್ದರು. ಕೆಲವರಂತೂ ನೀನು ಅದು ಹೇಗೆ ಹೋಗ್ತೀಯ ಆಕಾಶವಾಣಿಗೆ, ನಾವು ನೋಡಿಯೇ ಬಿಡ್ಡೇವೆ ಎಂದು ನನ್ನ ಹತ್ತಿರ ಬಂದು ಬೆದರಿಕೆ ಹಾಕಿ ಕೂಗಾಡುತ್ತ ಹೋದರು. ನಾನು ಭಯಭೀತನಾಗಿ ಹೋದೆ.
“ಸಾರ್ ದಯಮಾಡಿ ನನ್ನ ಕೈ ಬಿಟ್ಟು ಬಿಡಿ. ನನ್ನಿಂದ ನಿಮಗೆ ಕೆಟ್ಟ ಹೆಸರೇಕೆ? ಎಂದು ಸ್ಟಾಫ್ ರೂಂನಲ್ಲಿ ಕುಳಿತಿದ್ದ ಪಂಡಿತ ಚನ್ನಪ್ಪ ಎರೇಸೀಮೆ ಅವರಲ್ಲಿ ಕೈಮುಗಿದು ಕಣ್ಣಲ್ಲಿ ನೀರು ತುಂಬಿಕೊಂಡು ಕೇಳಿಕೊಂಡೆ.
“ಈ ಸ್ಪರ್ಧೆಯಲ್ಲಿ ಪ್ರಬಂಧಕ್ಕಿಂತಲೂ ಅದನ್ನು ವಾಚಿಸುವ ವಿದ್ಯಾರ್ಥಿಯ ದ್ವನಿ ಮುಖ್ಯ. ಅದು ಆಕಾಶವಾಣಿಯಲ್ಲಿ ಪ್ರಸಾರವಾಗಲು ಅರ್ಹವಾಗಿರಬೇಕು. ಆಕರ್ಷಕವಾಗಿಯೂ ಇರಬೇಕು. ಆ ಧ್ವನಿ ನಿನ್ನಲ್ಲಿದೆ. ಅದಕ್ಕಾಗಿಯೇ ನೀನು ಆಯ್ಕೆಯಾಗಿರುವೆ. ಇನ್ನು ಪ್ರಬಂಧಅದನ್ನು ನಾನೇ ಬರೆದುಕೊಡುವೆ. ಅದನ್ನು ಚೆನ್ನಾಗಿ ಕಂಠಪಾಠ ಮಾಡಿಕೊ, ಧೈರ್ಯವಾಗಿರು. ಬೆಂಗಳೂರಿಗೆ ಹೋಗಲು ಸಿದ್ದನಾಗು ಹೋಗು. ತಲೆಕೆಡಿಸಿಕೊಳ್ಳಬೇಡ” ಎಂದು ಬೆನ್ನು ತಟ್ಟದರು. ನನ್ನ ಕಣ್ಣಲ್ಲಿ ಆನಂದ ಬಾಷ್ಪ ತುಂಬಿ ಬಂತು. ಅವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿ ಹೊರ ಬಂದೆ. ವಿದ್ಯಾರ್ಥಿಗಳು ಇನ್ನೂ ಕೂಗಾಡುತ್ತಲೇ ಇದ್ದರು.
“ನಮ್ಮೂರು ಚಿತ್ರದುರ್ಗ” ಪ್ರಬಂಧವು ಅಂದವಾಗಿ ಅರ್ಥಗರ್ಭಿತವಾಗಿ ಪಂಡಿತ ಚನ್ನಪ್ಪ ಎರೇಸೀಮೆ ಅವರಿಂದಲೇ ಪ್ರಪ್ರಥಮವಾಗಿ ರಚಿಸಲ್ಪಟ್ಟು, ನನ್ನ ಕಂಠದಾನದ ಮೂಲಕ ಅವರ ಕೃಪೆಯಿಂದ ಅಂದು ಅದು ಬೆಂಗಳೂರಿನ ಆಕಾಶವಾಣಿಯಲ್ಲಿ ಪ್ರಪ್ರಥಮವಾಗಿ ಪ್ರಸಾರವಾಯಿತೆಂದರೆ ಅತಿಶಯೋಕ್ತಿ ಆಗಲಾರದು.
ಬೆಟ್ಟ ಗುಡ್ಡಗಳ ಸಾಲುಗಳಿಂದ ಸುತ್ತುವರಿದು ಸಾಲಂಕೃತವಾಗಿ ಕಂಗೊಳಿಸುತ್ತಿರುವ ನಮ್ಮೂರು ಚಿತ್ರದುರ್ಗ, ಅನ್ನುವ ನನ್ನ ಪ್ರಬಂಧದ ಮೊದಲ ಸಾಲನ್ನೇ ಇಷ್ಟಪಟ್ಟು, ಪಂಡಿತರು ಪ್ರಬಂಧದ ಪ್ರಥಮ ಸಾಲುಗಳನ್ನಾಗಿಸಿಕೊಂಡು ನನಗೆ ಚಿತ್ರದುರ್ಗದ ಇತಿಹಾಸವನ್ನು, ಏಳುಸುತ್ತಿನ ಕೋಟೆಯೊಳಗಿನ ಪ್ರೇಕ್ಷಣೀಯ ಸ್ಥಳಗಳನ್ನು ದೇವಾಲಯಗಳನ್ನು ಕುರಿತು ವಿವರವಾಗಿ ಬರೆದು ಕೊಟ್ಟಿದ್ದರು.
ಪಂಡಿತರು ನನ್ನನ್ನು ನಿಗಧಿತ ದಿನದಂದು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಕರೆದೊಯ್ದರು. ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದೆ. ಅಚ್ಚುಕಟ್ಟಾಗಿ. ನಿರರ್ಗಳವಾಗಿ ಮಾತನಾಡಿದೆ. ಅದು ನೇರ ಪ್ರಸಾರವಾಯಿತು. ಬಹು ಜನರ ಮೆಚ್ಚಿಗೆಗೆ ಪಾತ್ರವಾಯಿತು. ನನಗಿಂತಲೂ ಹೆಜ್ಜಾಗಿ ಗುರು ಪಂಡಿತರಿಗೆ ಆನಂದವಾಯಿತು.
ವಿಶೇಷವೇನೆಂದರೆ, ಚಿತ್ರದುರ್ಗದಲ್ಲಿ ಆಗಿದ್ದ ಸರ್ಕಾರಿ ಪ್ರಥಮ ದರ್ಜಿ ಕಾಲೇಜಿನ ಪ್ರಾಂಶುಪಾಲರು. ಆಕಾಶವಾಣಿಯಲ್ಲಿ ಪ್ರಸಾರಗೊಂಡ ನನ್ನ ವಾಚನವನ್ನು ಕೇಳಿ ಪ್ರಭಾವಿತರಾಗಿದ್ದರು. ಅವರು ನನ್ನನ್ನು ಅವರ ಕಾಲೇಜಿನ ಕಛೇರಿಗೆ ಕರೆಸಿಕೊಂಡು ಮುಂದೆ ಕೂರಿಸಿಕೊಂಡು, ಮತ್ತೊಮ್ಮೆ ಪ್ರಬಂಧ ವಾಚನವನ್ನು ನನ್ನಿಂದಲೇ ಪ್ರತ್ಯಕ್ಷವಾಗಿ ಕೇಳಿ ಖುಷಿಪಟ್ಟರು.
ಪಂಡಿತ ಚನ್ನಪ್ಪ ಎರೇಸೀಮೆ ಗುರು ದ್ರೋಣಚಾರ್ಕರಂತೆ ಶಿಷ್ಯರುಗಳ ನಡುವೆ ಬೇಧ ಮಾಡುತ್ತಿರಲಿಲ್ಲ. ತಮಗೆ ಬೇಕಾದ ವಿದ್ಯಾರ್ಥಿಯನ್ನು ಮುಂದೆ ತರಲು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅವರುಗಳ ಪತಿಭೆಗೆ ಕುಂದು ಬರುವಂತೆ ಯಾವುದೇ ಗುರುಕಾಣಿಕೆಯನ್ನು ಬೇಡಿದವರಲ್ಲ. ಬದಲಾಗಿ ಬಡವಿದ್ಯಾರ್ಥಿಗಳನ್ನು ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದರು.
ವಿಪರ್ಯಾಸವೆಂದರೆ, ನಾನು ಸಂಸ್ಕೃತ ಎದ್ಯಾರ್ಥಿ, ಕನ್ನಡ ಪಂಡಿತರ ವಿದ್ಯಾರ್ಥಿ ಅಲ್ಲ. ಆದರೂ ಅವರು ನನ್ನಲ್ಲಿನ ಕನ್ನಡದ ಕಂಪನ್ನು ಗುರುತಿಸಿದ್ದರು. ಕನ್ನಡವನ್ನು ನನ್ನೊಳಗೆ ಉಸಿರಾಗಿ ತುಂಬಿದ್ದರು. ಆ ಉಸಿರೇ ಅವರಾಗಿದ್ದರು. ನಮ್ಮಿಬ್ಬರ ನಡುವಣ ಕನ್ನಡದ ನಂಟುಬಿಗಿದ ಅನುಬಂಧವಾಗಿತ್ತು. ಅವರ ಪ್ರೇರಣೆ ಪ್ರೋತ್ಸಾಹದಿಂದಲೇ ನಾನಿಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಹೂವಾಗಿ ಅರಳಿ ನಿಂತಿದ್ದೇನೆ. ಗುರುಗಳು ಕಣ್ಮರೆಯಾಗಿದ್ದರೂ ಅವರ ಶಕ್ತಿ ನಮ್ಮನ್ನು ಬೆಳಸುತ್ತಿರುತ್ತದೆ. ಅದಕ್ಕೆ ಸಾಕ್ಷಿಯೋ ಎಂಬಂತೆ ನನ್ನೊಬ್ಬ ಪರಿಚಿತರ ಮೂಲಕ ಅವರ ನೂರು ವರ್ಷದ ಸ್ಮರಿಣೆಗೆ ಆಹ್ವಾನ ಬಂದಿದೆ. ಅವರ ಬಗ್ಗೆ ಒಂದೆರೆಡು ನಮನ ನುಡಿಗಳ ಬರೆಯುವ ಶಕ್ತಿ ಅನುಗ್ರಹಿತವಾಗಿದೆ. ಆ ಮಹಾನ್ ಚೇತನಕ್ಕೆ ಜನ್ಮ ಜನ್ಮಕ್ಕೂ ನಾನು ಋಣಿಯಾಗಿದ್ದೇನೆ.
ಪಂಡಿತ ಚನ್ನಪ್ಪ ಎರೇಸೀಮೆಯವರಂತೆ ನಿಜ ಪಂಡಿತರು ವಿಶಾಲ ಹೃದಯಿಗಳು. ಶಿಕ್ಷಣ ಕ್ಷೇತ್ರದಲ್ಲಿ ಚಿರಾಯುಗಳಾಗಿ ಕನ್ನಡ ನಾಡಿಗೆ ನುಡಿಗೆ ಯಶಸ್ಸಿನ ಸೇವೆ ನೀಡಿ ಕನ್ನಡವನ್ನು ಬೆಳಿಸಿ ಉಳಿಸುವಂತ ಶಿಷ್ಯಕೋಟಿಗಳನ್ನು ಬೆಳಸುವಂತವರಾಗಲಿ ಎಂದು ಆಶಿಸುವೆ.
ಜೈ ಕರ್ನಾಟಕ! ಜೈ ಕನ್ನಡ ಮಾತೆ!
ಎಸ್. ಪ್ಲೋಮಿನ್ದಾಸ್ ಚಿತ್ರದುರ್ಗ