ಪಂಡಿತ ಚೆನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ – ಸಾಂದರ್ಭಿಕ ಲೇಖನ
ಆದರ್ಶ ಶಿಕ್ಷಕ, ಶ್ರೇಷ್ಠ ವಿದ್ವಾಂಸ, ನ್ಮಡಿಗಾರುಡಿಗ ಲಿಂಗೈಕ್ಯ ಪಂ. ಚೆನ್ನಪ್ಪ ಎರೇಸೀಮೆಯವರು
ಆದರ್ಶ ಶಿಕ್ಷಕ, ನುಡಿಗಾರುಡಿಗ, ಶಿಕ್ಷಣ ತಜ್ಞ, ಸರಳತೆ, ಸಜ್ಜನಿಕೆ, ಸಹೃದಯತೆಯ ಸಾಕಾರಮೂರ್ತಿಯಾಗಿದ್ದ ಪಂ. ಚೆನ್ನಪ್ಪ ಎರೇಸೀಮೆಯವರು ಶಿಕ್ಷಣ, ಸಾಹಿತ್ಯ, ಸಂಪಾದನೆ, ಕೀರ್ತನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆ ಸದಾ ಹಚ್ಚಹಸಿರು.
ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಎರಡು ಗುಂಪಿನ ಜನರನ್ನು ಕಾಣಬಹುದು. ಕೆಲವರು ಕೀರ್ತಿಯ ಬೆನ್ನು ಹತ್ತಿದರೆ ಮತ್ತೆ ಕೆಲವರಿಗೆ ಕೀರ್ತಿಯೇ ಬೆನ್ನತ್ತಿ ಹೋಗುತ್ತದೆ. ಪಂಡಿತ ಚೆನ್ನಪ್ಪ ಎರೇಸೀಮೆಯವರು ಎರಡನೇ ಗುಂಪಿಗೆ ಸೇರಿದವರು. ಅವರು ನಾಡಿನ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ವಿಶಿಷ್ಟ ಸೇವೆಯನ್ನು ಸಲ್ಲಿಸಿದ್ದ ಶ್ರೇಷ್ಠ ವಿದ್ವಾಂಸರು.
ಚೆನ್ನಪ್ಪ ಎರೇಸೀಮೆಯವರು ಹುಟ್ಟಿದ್ದು ಶಾಲಾ ದಾಖಲೆಯ ಪ್ರಕಾರ 1919ನೇ ಸೆಪ್ಟೆಂಬರ್ 3
ರಂದು, ಧಾರವಾಡ ಜಿಲ್ಲೆ ಹಾನಗಲ್ ತಾಲ್ಲೂಕು ಹರವಿ ಗ್ರಾಮದಲ್ಲಿ. ಹಡೆದ ಪುಣ್ಯಜೀವಿಗಳು ತಂದೆ ಮುದುಕಪ್ಪ; ತಾಯಿ ಸಂಗಮ್ಮ. ಅವರದು ಸಂಪ್ರದಾಯಸ್ಥ ಬಡ ರೈತ ಕುಟುಂಬ. ಬಾಲಕ ಚೆನ್ನಪ್ಪ ಅವರಿಗೆ ಓದಬೇಕೆಂಬ ಆಸೆ ಸದಾ ತುಡಿಯುತ್ತಿದ್ದರೂ, ಕಿತ್ತು ತಿನ್ನುವ ಬಡತನದಿಂದ ವ್ಯಾಸಂಗ ಸುಗಮವಾಗಿ ನಡೆಯಲಿಲ್ಲ. ಓದಲೇಬೇಕು ಎಂಬ ಛಲ ಅವರನ್ನು ಆಗಿನ ಮುಲ್ಕಿ ಪರೀಕ್ಷೆಯವರೆಗೂ ಬರುವಂತೆ ಮಾಡಿತು. ಜ್ಞಾನದ ಹಸಿವಿನ ಮುಂದೆ ಹೊಟ್ಟೆ ಹಸಿವು ಸೋಲನ್ನು ಒಪ್ಪಿಕೊಂಡಿತು. ಕಷ್ಟಪಟ್ಟು ಓದಿ ನೌಕರಿ ಸೇರಿಕೊಂಡು ಕುಟುಂಬವನ್ನು ಬಡತನದಿಂದ ಪಾರುಮಾಡಬೇಕೆಂಬ ಉತ್ಕಟ ಆಕಾಂಕ್ಷೆಯಿಂದ ಓದಲು ಭಗೀರಥ ಪ್ರಯತ್ನ ಮಾಡಿದರು. ಆರನೇ ಕ್ಲಾಸು ಸೇರಲು ಅವರ ಮನೆಯವರಿಗೆ ಎರಡೂವರೆ ಆಣೆ ಕೊಡಲು ಸಾಧ್ಯವಾಗಲಿಲ್ಲ. ಹಣಕ್ಕಾಗಿ ಬೇರೆಯವರ ಮುಂದೆ ಕೈಚಾಚಲು ಸ್ವಾಭಿಮಾನ ಅಡ್ಡಬಂದಿತು. ಹೊಲದಲ್ಲಿ ಬೆವರು ಸುರಿಸಿ ದುಡಿದು ಹಣ ಕೂಡಿಟ್ಟುಕೊಂಡು ಓದನ್ನು ಮುಂದುವರಿಸಿದ ದಿಟ್ಟ ಹೋರಾಟಗಾರರು. ಹಿಡಿದ ಕೆಲವನ್ನು ಸಾಧಿಸಬೇಕೆಂಬ ಉತ್ಕಟವಾದ ಬಯಕೆ, ಆತ್ಮಸ್ಥೈರ್ಯ ಅವರ ಬದುಕಿಗೆ ಶ್ರೀರಕ್ಷೆಯಾಯಿತು, ದಾರಿದೀಪವಾಯಿತು.
ಮುಲ್ಕಿ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ಪಾಸು ಮಾಡಿದ ನಂತರ ಗಾಂವಠೀ ಶಾಲೆಯಲ್ಲಿ ಶಿಕ್ಷಕರಾಗಲು ಪ್ರಯತ್ನಿಸಿದರು. ಆದರೆ ಅವರಿಗೆ ಎಲ್ಲ ಅರ್ಹತೆಗಳಿದ್ದರೂ ವಯಸ್ಸು ಚಿಕ್ಕದು ಎಂಬ ಕಾರಣಕ್ಕಾಗಿ ಕೆಲಸ ಕೊಡಲು ನಿರಾಕರಿಸಲಾಯಿತು. ಕಾಲದ ಮಹತ್ವವನ್ನು ಅರಿತಿದ್ದ ಅವರು ಕಾಲ ವ್ಯಯ ಮಾಡಲು ಇಷ್ಟಪಡದೆ ಮತ್ತೆ ಹಳ್ಳಿಗೆ ಹಿಂದಿರುಗಿ ಸ್ವಲ್ಪಕಾಲ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ತಿಂಗಳಿಗೆ 9 ರೂ. ಸಂಬಳದ ಮೇಲೆ ಮಲೆನಾಡಿನ ಗಾಂವಠೀ ಶಾಲಾ ಮಾಸ್ತರರಾಗಿ ವೃತ್ತಿ ಜೀವನ ಆರಂಭಿಸಿದರು. ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿ ವಿದ್ಯಾರ್ಥಿಗಳ ಹಾಗೂ ಪೋಷಕರ ಮನಸ್ಸನ್ನು ಗೆದ್ದು ಜನಪ್ರಿಯ ಶಿಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಲೆನಾಡಿನ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ಕೃತಿಕ ಬದುಕಿನಲ್ಲಿ ಹಾಸು ಹೊಕ್ಕಾದರು. ತಮ್ಮಲ್ಲಿದ್ದ ಪ್ರತಿಭೆಯನ್ನು ತೋರಿಸಲು ಸೂಕ್ತ ವೇದಿಕೆಯನ್ನು ರೂಪಿಸಿಕೊಂಡರು. ನಾಟಕ ಬರೆದು ಆಡಿಸಿ, ಕಥಾ ಕಾಲಕ್ಷೇಪಗಳನ್ನು
ಮಾಡಿ ಮನೆಮಾತಾದರು.
ದಿನಕಳೆದಂತೆ ಚೆನ್ನಪ್ಪನವರಲ್ಲಿ ಜ್ಞಾನದಾಹ ಹೆಚ್ಚಾಗುತ್ತಲೇ ಇತ್ತು. ಓದನ್ನು ಮುಂದುವರಿಸಬೇಕೆಂಬ ಬಯಕೆ ಅವರಲ್ಲಿ ಸದಾ ಜಾಗೃತವಾಗಿತ್ತು. ತುಮಕೂರಿನಲ್ಲಿ ವಿಟಿಸಿ (ವರ್ನಾಕ್ಯುಲರ್ ಟೀಚರ್ ಸರ್ಟಿಫಿಕೇಟ್) ಕೋರ್ಸ್‍ನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಅಷ್ಟಕ್ಕೇ ಅವರು ತೃಪ್ತರಾಗಲಿಲ್ಲ. ನಂತರ ಮೈಸೂರಿನಲ್ಲಿ ಪಂಡಿತ ಪರೀಕ್ಷೆಗಾಗಿ ಅಧ್ಯಯನ ಮಾಡಿ ದ್ವಿತೀಯ ರ್ಯಾಂಕ್‍ನ್ನು ತಮ್ಮದಾಗಿಸಿಕೊಂಡರು. ತಮ್ಮ ಹೆಸರಿನ ಮುಂದೆ ‘ಪಂಡಿತ’ ಎಂದು ಸೇರಿಸಿಕೊಳ್ಳಲು ಅವರು ನಡೆಸಿದ ಹೋರಾಟ ಅವರ ಬದುಕಿನ ಸಾಧನೆಯ ಮೈಲಿಗಲ್ಲು. ಉಭಯ ಭಾಷಾ ವಿದ್ವಾಂಸರಾಗಿದ್ದು ಚೆನ್ನಪ್ಪ ಎರೇಸೀಮೆಯವರು
ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ, ನಂತರ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಭಾಷಾ ಸಾಹಿತ್ಯದ ಶಿಕ್ಷಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಅನುಪಮ ಸೇವೆ ಸಲ್ಲಿಸಿ 1974ರಲ್ಲಿ ವೃತ್ತಿಯಿಂದ ನಿವೃತ್ತರಾದರು.
ಉತ್ತಮ ಹಾಗೂ ಆದರ್ಶ ಶಿಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಪಂಡಿತ ಚೆನ್ನಪ್ಪ ಎರೇಸೀಮೆಯವರು ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ‘ಪ್ರೀತಿಯ ಮೇಷ್ಟ್ರ’ರಾಗಿದ್ದರು. ತಮ್ಮಲ್ಲಿದ್ದ ಪ್ರತಿಭೆಯನ್ನು ಧಾರೆ ಎರೆದು ಜ್ಞಾನಜ್ಯೋತಿ ಪ್ರಜ್ವಲವಾಗಿ ಬೆಳಗುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಪಂಡಿತ ಚೆನ್ನಪ್ಪ ಎರೇಸೀಮೆಯವರ
ಶಿಷ್ಯರೆಂದು ಹೇಳಿಕೊಳ್ಳಲು ತುಂಬಾ ಹಿಗ್ಗು. ಆದರ್ಶಗಳ ಮುಂಬೆಳಕಿನಲ್ಲಿ ಹತ್ತು ಜನ ಮೆಚ್ಚುವಂತೆ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದ ಸಾತ್ವಿಕ ವ್ಯಕ್ತಿತ್ವ ಇವರದು.
ಸಾಹಿತ್ಯ ಕ್ಷೇತ್ರ: ಎರೇಸೀಮೆಯವರು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಅಮೂಲ್ಯ ಕೃತಿಗಳನ್ನು ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಹೊಸಗನ್ನಡ ಸರಳ ವ್ಯಾಕರಣ ಪಾಠಗಳು, ಅರವಿಂದ, ಬಸವಣ್ಣನವರ ಕ್ರಾಂತಿ ಕಹಳೆ, ಬಸವಣ್ಣನವರ ಪಂಚಪರುಷ, ಅಜಗಣ್ಣ-ಮುಕ್ತಾಯಕ್ಕ, ಸಿದ್ಧರಾಮನ ಲಿಂಗತಪಸ್ಸು, ಸಿದ್ಧಗಂಗಾ ಕ್ಷೇತ್ರದ ಇತಿಹಾಸ-ಪರಂಪರೆ, ಚನ್ನಮಲ್ಲಿಕಾರ್ಜುನ, ಉದ್ದಾನ ಶಿವಯೋಗಿ, ರಾಜಶೇಖರ ವಿಳಾಸವೂ ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು
ನೀಡಿದ್ದಾರೆ. ನಾಡಿನ ಹಿರಿಯ ವಿದ್ವಾಂಸರಾದ ಎಚ್. ದೇವೀರಪ್ಪ, ಡಾ. ರಂ.ಶ್ರೀ. ಮುಗಳಿ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಶಿ.ಚ. ನಂದೀಮಠ, ಟಿ.ಆರ್. ಮಹಾದೇವಯ್ಯ ಅವರೊಂದಿಗೆ ಸೇರಿ ಹತ್ತಕ್ಕೂ ಹೆಚ್ಚು ಶ್ರೇಷ್ಠ ಪ್ರೌಢ ಗ್ರಂಥಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎಂಬತ್ತಕ್ಕೂ ಹೆಚ್ಚು ಮೌಲಿಕ ಲೇಖನಗಳು ಅಭಿನಂದನಾ ಗ್ರಂಥಗಳು, ಪ್ರೌಢಗ್ರಂಥಗಳು, ವಿಶೇಷ ಸಂಚಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಬೆಳಕು ಕಂಡು ವಿದ್ವಾಂಸರ ಗಮನವನ್ನು ಸೆಳೆದಿವೆ. ಮಕ್ಕಳಿಗೆ ಸಂಬಂಧಿಸಿದಂತೆ ಅನೇಕ ಕೃತಿಗಳೂ ಪ್ರಕಟವಾಗಿವೆ. ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ.
ಶ್ರೇಷ್ಠ ಪ್ರವಚನಕಾರ : ಉತ್ತಮ ವಾಗ್ಮಿಗಳಾದ ಪಂಡಿತ ಚೆನ್ನಪ್ಪ ಎರೇಸೀಮೆ ಅವರು ಕುತೂಹಲ ಕೆರಳಿಸುವಂತೆ ಕಥಾ ಕಾಲಕ್ಷೇಪ ಮಾಡುವುದರ ಮೂಲಕ ಜನಪ್ರಿಯರಾಗಿದ್ದರು. ಅವರದು ಬಹುಮುಖ ಪ್ರತಿಭೆ. ನಾಟಕಕಾರರಾಗಿ, ಪ್ರವಚನಕಾರರಾಗಿ ಅವರು ಸಲ್ಲಿಸಿದ ಸೇವೆ, ಮಾಡಿದ ಸಾಧನೆ ಮಹತ್ತರವಾದುದು.
ಆದರ್ಶ ಕುಟುಂಬ: ಪಂ. ಚನ್ನಪ್ಪ ಎರೇಸೀಮೆಯವರದು ಆದರ್ಶ ಸುಸಂಸ್ಕøತ ಕುಟುಂಬ. ಅವರನ್ನು
ಕೈಹಿಡಿದ ಭಾಗ್ಯವಂತೆ ಶ್ರೀಮತಿ ಪಾರ್ವತಮ್ಮನವರು. “ಇಚ್ಛೆಯನರಿತ ಸತಿಯಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ” ಎಂಬ ಸರ್ವಜ್ಞನ ಮಾತು ಇವರ ಕುಟುಂಬದಲ್ಲಿ ಸಾಕಾರಗೊಂಡಿತ್ತು. ಶ್ರೀಮತಿ ಪಾರ್ವತಮ್ಮನವರಷ್ಟೇ ಭಾಗ್ಯವಂತರಲ್ಲ. ಅಂತಹ ಸದ್ಗುಣಶೀಲೆ, ಸರಳತೆ, ಸಜ್ಜನಿಕೆ, ಹೃದಯವಂತಿಕೆಯುಳ್ಳ ಪಾರ್ವತಮ್ಮನವರನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದ ಶ್ರೀ ಚೆನ್ನಪ್ಪ ಎರೇಸೀಮೆಯವರೂ ಭಾಗ್ಯವಂತರೆ. ಹಾಲು ಜೇನು ಬೆರೆತಂತೆ, ಸಾಮರಸ್ಯದಿಂದ ಕೂಡಿದ ಆದರ್ಶ ಸಂಸಾರ.
“ಬಡತನ ನಮಗಿರಲಿ, ಮನೆ ತುಂಬ ಮಕ್ಕಳಿರಲಿ” ಎಂದು ಹಾಡಿ ಹಾರೈಸುತ್ತಿದ್ದ ಜನಪದ ತಾಯಂದಿರ ಮಾತು ಹುಸಿಯಾಗಲಿಲ್ಲ! ಶ್ರೀ ವೈ.ಸಿ. ಶಿವಕುಮಾರ್, ಶ್ರೀ ವೈ.ಸಿ. ಕಲ್ಲಿನಾಥ ಹಾಗೂ ಶ್ರೀ ವೈ.ಸಿ.
ಜಯವಿಭವಸ್ವಾಮಿ ಮೂರು ಜನ ಗಂಡು ಮಕ್ಕಳು, ಶ್ರೀಮತಿ ವೈ.ಸಿ. ರಾಜೇಶ್ವರಿ, ಶ್ರೀಮತಿ ವೈ.ಸಿ.
ಸಂಗಮೇಶ್ವರಿ, ಶ್ರೀಮತಿ ವೈ.ಸಿ. ವನಜಾಕ್ಷಿ ಹಾಗೂ ಶ್ರೀಮತಿ ವೈ.ಸಿ. ಕಮಲ ನಾಲ್ಕು ಜನ ಹೆಣ್ಣುಮಕ್ಕಳು. ತುಂಬು ಕುಟುಂಬ. ಶಿಕ್ಷಕ ವೃತ್ತಿಯಲ್ಲಿದ್ದ ಪಂ. ಚೆನ್ನಪ್ಪ ಎರೇಸೀಮೆ ಅವರು ಅಷ್ಟೇನು ಅರ್ಥಿಕವಾಗಿ
ಸುಸ್ಥಿತಿಯಾಗಿಲ್ಲದಿದ್ದರೂ ಮಕ್ಕಳೆಲ್ಲರನ್ನು ವಿದ್ಯಾವಂತರನ್ನಾಗಿ ಮಾಡಿದರು. ಶಿಕ್ಷಣದ ಜೊತೆಗೆ ಹೃದಯವಂತಿಕೆಯನ್ನು, ಆಚಾರ ವಿಚಾರಗಳನ್ನು, ಸಂಪ್ರದಾಯವನ್ನು, ಮಾನವೀಯ ಮೌಲ್ಯಗಳನ್ನು ಕಲಿಸಿ ಕೊಡುವುದರ ಮೂಲಕ ಆದರ್ಶ ನಾಗರಿಕರನ್ನಾಗಿ ಮಾಡಿದರು. ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ದಾರಿದೀಪವಾದರು. ಒಬ್ಬ ತಂದೆಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಇತರರಿಗೆ ಆದರ್ಶ ವಾದರು. ಅವರೆಲ್ಲರೂ ಉತ್ತಮ ಉದ್ಯೋಗದಲ್ಲಿದ್ದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಪರಮಪೂಜ್ಯ ಶ್ರೀ ಶ್ರೀಗಳವರೊಂದಿಗೆ ಅವಿನಾಭಾವ ಸಂಬಂಧ : ಪಂ. ಚೆನ್ನಪ್ಪ ಎರೇಸೀಮೆಯವರು ಶ್ರೀ ಸಿದ್ಧಗಂಗಾ ಮಠ ಹಾಗೂ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಬಗ್ಗೆ ಅಪಾರವಾದ ಭಕ್ತಿ, ಗೌರವವನ್ನಿಟ್ಟುಕೊಂಡಿದ್ದರು. ಪರಮಪೂಜ್ಯ ಶ್ರೀ ಶ್ರೀಗಳವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಅವರು ಪೂಜ್ಯರನ್ನು ಕುರಿತು :
“ಸಿದ್ಧಗಂಗಾ ಕ್ಷೇತ್ರದ ಅಧಿಪತಿಗಳಾದ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ದಾಸೋಹ ವ್ರತಕ್ಕೆ ಚ್ಯುತಿಬಾರದಂತೆ ಎಂತ ಶ್ರಮವನ್ನಾದರೂ ಮಾಡಿ ಲೋಕಜೀವನಕ್ಕೆ ತಮ್ಮ ಸರ್ವಸ್ವವನ್ನು ಅರ್ಪಿಸುತ್ತ ಬಂದುದೇ ಒಂದು ದೊಡ್ಡ ಇತಿಹಾಸ. ಈ ದಿವ್ಯಾದರ್ಶ, ಭವ್ಯಾದರ್ಶ, ನನ್ನನಂತೂ ಮುಗ್ಧನನ್ನಾಗಿ ಮಾಡಿತ್ತು. ಶ್ರೀಗಳವರ ಅಗಾಧ ಲೋಕೋಪಕಾರಕ ಬುದ್ಧಿಗೆ ನಾನು ಯಾವ ತ್ಯಾಗವನ್ನಾದರೂ ಮಾಡಲು ಎಂದೋ ಸಂಕಲ್ಪ ಮಾಡಿಕೊಂಡುಬಿಟ್ಟೆನೆಂದರೆ ತಪ್ಪಲ್ಲ. ಅವರಿಗೆ ಸದಾ ತಲೆತುಂಬ ಸಮಾಜ ಚಿಂತನೆ. ಮೈತುಂಬಾ ಉತ್ಸಾಹ, ಬುದ್ಧಿ ತುಂಬಾ ಯೋಚನೆ. ತಮ್ಮ ಶ್ರಮದ ಬಗೆಗೆ ಅವರಿಗೆ ಅರಿವೇ ಇರುತ್ತಿರಲಿಲ್ಲ. ಸಮಾಜ ಹಿತಕ್ಕಾಗಿ ಹಸಿವು ನೀರಡಿಕೆ ಕಟ್ಟಿದ್ದಾರೆ. ಮೈ ಬಗ್ಗಿಸಿ ದುಡಿದಿದ್ದಾರೆ. ಇದು ಅವರ ಜೀವನ ನಿರ್ವಹಣೆಗಲ್ಲ. ಲೋಕಜೀವನ ಕ್ಷೇಮಕ್ಕೆ. ಲಾಭಕ್ಕೆ. ಕಪಿಲೆ ಎಳೆದ ಈ ಘಟನೆ ನಾನು ದೇವರಾಯಪಟ್ಟಣ ಶಾಲಾ ಹೆಡ್‍ಮಾಸ್ತರನಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ನಡೆದದ್ದು. ಅದು ಇಂದಿಗೂ ನನ್ನ ಸ್ಮೃತಿಪಥದಲ್ಲಿ ಹಚ್ಚ ಹಸಿರಾಗಿಯೇ ಇದೆ. ನೆನೆದಾಗ ಮನಸ್ಸಿನ ಮುಂದೆ ಧುತ್ತೆಂದು ನಿಂತು ಬಿಡುತ್ತದೆ. ಚಿತ್ತ ಭಿತ್ತಿಯಲ್ಲಿ ಸಂಸ್ಕಾರಗೊಂಡು ನಿಂತಿದೆ. ಸಿದ್ಧಗಂಗಾ ಶ್ರೀಗಳವರ ಹೃದಯ ಬಹು ಎತ್ತರಮಟ್ಟದ್ದು. ಅವರಿಗೆ ಸದಾ ತಮ್ಮ ಕೈಲಾದಮಟ್ಟಿಗೆ ಲೋಕಕ್ಕೆ ಉಪಕಾರ ಮಾಡಬೇಕೆಂಬುದೊಂದನ್ನು ಬಿಟ್ಟರೆ ಯಾವ ಸ್ವಾರ್ಥವನ್ನಂತೂ ನಾನು ಕಾಣಲಿಲ್ಲ. ಅವರ ಬಗೆಗೆ ನನ್ನನ್ನು ಅರ್ಪಿಸಿಕೊಂಡು ಬಿಟ್ಟೆ. ಇಂದಿಗೂ ಆ ಭಾವನೆ ನನ್ನಿಂದ ಅಳಿಸಿಲ್ಲ. ಈ ಭಾವನೆಯೇ ನನ್ನಿಂದ ಅವರ ಪುರಾಣ ಬರೆಸಿವೆ. ‘ಸಿದ್ಧಗಂಗಾ ಶ್ರೀ’ ಗ್ರಂಥ ಯಶಸ್ಸು ಗಳಿಸಿದ್ದೂ ನನ್ನ ಈ ಭಾವನೆಯಿಂದ ಮಾಡಿಸಿದ ಕೆಲಸಕ್ಕೆ ಪ್ರತೀಕ” ಎಂದಿದ್ದಾರೆ.
ಪರಮಪೂಜ್ಯರನ್ನು ಕುರಿತು ಪಂ. ಚೆನ್ನಪ್ಪ ಎರೇಸೀಮೆಯವರ ಒಂದೊಂದು ನುಡಿಗಳೂ ಅವರ ಹೃದಯದಿಂದ ಬಂದವುಗಳು. ಪರಮಪೂಜ್ಯ ಶ್ರೀಗಳವರ ಘನಶಿವ ವ್ಯಕ್ತಿತ್ವಕ್ಕೆ ಭಾಷ್ಯ ಬರೆದಂತಿದೆ.
ಶ್ರೀ ಸಿದ್ಧಗಂಗಾ ಕ್ಷೇತ್ರದೊಡನೆ ಆತ್ಮೀಯ ಸಂಬಂಧ : ಮೂರು ದಶಕಗಳ ಕಾಲ ಶ್ರೀ ಸಿದ್ಧಗಂಗಾ ಕ್ಷೇತ್ರದಿಂದ ಪ್ರಕಟವಾಗುತ್ತಿರುವ ‘ಸಿದ್ಧಗಂಗಾ’ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುವುದರ ಮೂಲಕ ಪತ್ರಿಕೆ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಲ್ಲದೆ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ
ಮಹಾಸ್ವಾಮಿಗಳವರ ಪಟ್ಟಾಧಿಕಾರ ಮಹೋತ್ಸವದ ಮಹಾಸಂಪುಟ ‘ಸಿದ್ಧಗಂಗಾಶ್ರೀ’ ಮತ್ತು ವಜ್ರಮಹೋತ್ಸವ ಮಹಾಸಂಪುಟ ‘ದಾಸೋಹಸಿರಿ’ ಉದ್ಗ್ರಂಥಗಳನ್ನು ಶ್ರೀ ಟಿ.ಆರ್. ಮಹಾದೇವಯ್ಯನವರ ಜೊತೆ ಸೇರಿ ಹೊರ ತಂದಿದ್ದು ಅಪೂರ್ವ ದಾಖಲೆಯಾಗಿದೆ.
ಪಂ. ಚೆನ್ನಪ್ಪ ಎರೇಸೀಮೆಯವರ ಸೇವಾತತ್ಪರತೆ : ಸದಾ ಕ್ರಿಯಾಶೀಲರಾಗಿದ್ದ ಪಂ. ಚೆನ್ನಪ್ಪ ಎರೇಸೀಮೆ ಯವರು ಯಾವುದೇ ಕೆಲಸವನ್ನು ವಹಿಸಿಕೊಳ್ಳಲಿ ಶ್ರದ್ಧೆ, ನಿಷ್ಠೆ, ಬದ್ಧತೆಯಿಂದ ಮಾಡುತ್ತಿದ್ದರು. ಈ ಗುಣಗಳಿಂದ
ಅವರು ಯಶಸ್ಸನ್ನು ಕಾಣುತ್ತಿದ್ದರು ಅವರ ಕಾರ್ಯ ನಿಷ್ಠೆ, ಸೇವಾ ಮನೋಭಾವದ ಪ್ರಾಮಾಣಿಕತೆ ಬಗ್ಗೆ ‘ಸಿದ್ಧಗಂಗಾಶ್ರೀ’ ಬೃಹತ್ ಗ್ರಂಥ ಸಂಪಾದನೆಯಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯ ವಿದ್ವಾಂಸರಾದ ಶ್ರೀ ಟಿ.ಆರ್. ಮಹಾದೇವಯ್ಯನವರು ಹಂಚಿಕೊಂಡ ವಿಚಾರಗಳು ಪಂ. ಚೆನ್ನಪ್ಪ ಎರೇಸೀಮೆಯವರ ವ್ಯಕ್ತಿತ್ವವನ್ನು ದರ್ಶನ ಮಾಡಿಸುತ್ತದೆ.
“ಸಿದ್ಧಗಂಗೆಯ ಪೂಜ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಸಿದ್ಧತೆಗಳಾಗುತ್ತಿದ್ದ ಸಂದರ್ಭ. ಪೂಜ್ಯರಿಗೆ ಸಮರ್ಪಣೆ ಮಾಡುವ ಅಭಿನಂದನ ಗ್ರಂಥ ‘ಸಿದ್ಧಗಂಗಾಶ್ರೀ’ಯು ರೂಪುಗೊಳ್ಳುತ್ತಿತ್ತು. ಅದರ ಸಂಪಾದಕರಾಗಿ ಪಂ. ಚೆನ್ನಪ್ಪ ಎರೇಸೀಮೆಯವರು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯವನ್ನು ಡಾ. ಸಿದ್ಧಯ್ಯ ಪುರಾಣಿಕರು ಅಧ್ಯಕ್ಷರಾಗಿದ್ದ ಸಂಪಾದಕ ಸಮಿತಿ ನನಗೆ ಒದಗಿಸಿತ್ತು. ಗ್ರಂಥವು ಅಭಿನಂದನ ಗ್ರಂಥಗಳ ಶ್ರೇಣಿಯಲ್ಲಿ ಅಪೂರ್ವ ಕೃತಿಯಾಗಬೇಕೆಂದು ನಾಡಿನ ಒಳ-ಹೊರಗಿನ ವಿದ್ವಾಂಸರನ್ನು ಸಂಪರ್ಕಿಸಿ ಲೇಖನಗಳನ್ನು ಬರೆಸಿ ಪ್ರೆಸ್‍ಗೆ ಕೊಡಲಾಗಿತ್ತು. ಆಗ ಈಗಿನಂತೆ ಶೀಘ್ರಗತಿಯ ಮುದ್ರಣ ಸೌಕರ್ಯವಿರಲಿಲ್ಲ. ಆದರೂ ಕೆಲಸ ಚುರುಕಾಗಿ ನಡೆದಿತ್ತು. ಆ ಗ್ರಂಥದಲ್ಲಿ ಅಳವಡಿಸಬೇಕಾದ ಚಿತ್ರ ಸಂಪುಟದ ಬಗ್ಗೆ ಯೋಚನೆಗೀಡಾದವು. ಏಕೆಂದರೆ ಆಗ ಬೆಂಗಳೂರಿನಲ್ಲಿ ಒಂದೆರೆಡು ಕಡೆ ಮಾತ್ರ ಬಣ್ಣದ ಆಫ್‍ಸೆಟ್ ಮುದ್ರಣಕ್ಕೆ ಅವಕಾಶವಿದ್ದು ದುಬಾರಿ ವೆಚ್ಚವಾಗುತ್ತಿತ್ತು. ತಮಿಳುನಾಡಿನ ಶಿವಕಾಶಿಯು ಫೋಟೋ ಮುದ್ರಣಕ್ಕೆ ಹೆಸರಾಗಿತ್ತು. ಅಲ್ಲಿಗೆ ಹೋಗಿ ಕಡಿಮೆ ಬೆಲೆಗೆ ವರ್ಣಚಿತ್ರಗಳನ್ನು ಮುದ್ರಿಸಿಕೊಂಡು ಬರಬೇಕೆಂದು ತೀರ್ಮಾನಿಸಿದೆವು. ಅದರಂತೆ ಪೂಜ್ಯರ ಆಶೀರ್ವಾದದೊಡನೆ ನಾನು ಮತ್ತು ಎರೇಸೀಮೆಯವರು ಶಿವಕಾಶಿಗೆ ಹೋದೆವು.
ಅಲ್ಲಿ ಪ್ರಖ್ಯಾತ ವರ್ಣಚಿತ್ರ ಮುದ್ರಕರನ್ನು ಭೇಟಿ ಮಾಡಿ ಶ್ರೀಮಠದ ಹಾಗೂ ಶ್ರೀ ಶ್ರೀಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿದೆವು. ನಮಗೆ ತಮಿಳು ಬರದು, ಅವರಿಗೆ ಕನ್ನಡ ಬರದು. ಆದರೆ ಅವರಿಗೆ ಸಿದ್ಧಗಂಗಾ ಕ್ಷೇತ್ರದ ಬಗ್ಗೆ ಸ್ವಲ್ಪಮಟ್ಟಿನ ಪರಿಚಯವಿತ್ತು. ನಾವು ಒದಗಿಸಿದ ಇಂಗ್ಲೀಷ್ ವಿವರಣೆಯ ಸಾಹಿತ್ಯದಿಂದ ಪೂರ್ಣ ಪರಿಚಯ ಪಡೆದರು. ವ್ಯವಹಾರದ ಮಾತನಾಡಿದೆವು. ಬಹಳ ಕಡಿಮೆ ಖರ್ಚಿನಲ್ಲಿ ಚಿತ್ರಸಂಪುಟ ಮುದ್ರಿಸಿಕೊಡುವ ಭರವಸೆ ನೀಡಿದರು. ನಮಗೆ ಆಶ್ಚರ್ಯವಾಯಿತು. “ನಾಳೆ ನಿಮಗೆ ಅವುಗಳ ಪ್ರೂಫ್ ತೋರಿಸುತ್ತೇವೆ. ನೋಡಿ ನೀವು ಒಪ್ಪಿಗೆ ನೀಡಿದರೆ ವಾರದೊಳಗೆ ಎಲ್ಲಾ ಅಚ್ಚು ಮಾಡಿ ಕಳುಹಿಸಿಕೊಡುತ್ತೇವೆ.”
ಆ ದಿನ ನಾವು ಅಲ್ಲಿ ಉಳಿಯುವುದು ಅನಿವಾರ್ಯವಾಯಿತು. ಸುಮ್ಮನೆ ಕಾಲ ಕಳೆಯುವುದು ಹೇಗೆ? ರಾಮೇಶ್ವರ ಅಲ್ಲಿಗೆ ಸಮೀಪ. ಅಲ್ಲಿಗೆ ಹೋಗಿ ಬರೋಣ ಎಂದರು ಎರೇಸೀಮೆಯವರು. ಜೊತೆಗೆ ಇನ್ನೊಂದು ಮಾತನ್ನು ಸೇರಿಸಿದರು. ‘ರಾಮೇಶ್ವರಕ್ಕೆ ಹೋಗಿ ಬರುವ ಖರ್ಚನ್ನು ನಾವೇ ಹಾಕಿಕೊಳ್ಳೋಣ. ಮಠದ ದುಡ್ಡು ಬಳಸುವುದು ಬೇಡ ಎಂದರು. ಹಾಗೆ ಮಾಡೋಣವೆಂದು ನಾನು ಹೇಳಿದ ಮೇಲೆ ಇಬ್ಬರಿಗೂ ಸಮಾಧಾನ. ಬೆಳಗ್ಗೆಯೇ ಅಲ್ಲಿಗೆ ಹೋಗಿ ಹಿಂದುರಿಗಿದೆವು.
ತಮಿಳು ನಾಡಿನಲ್ಲಿ ತಮಿಳು ಬಿಟ್ಟರೆ ಬೇರೆ ಭಾಷೆ ನಡೆಯುವುದಿಲ್ಲ. ಆ ಭಾಷೆ ಬಾರದವರಿಗೆ ವ್ಯವಹಾರ ಸ್ವಲ್ಪ ಕಷ್ಟವೇ. ಹೋಟೆಲ್‍ಗೆ ಹೋದಾಗಲೆಲ್ಲಾ ನಮಗೆ ಅದು ಅನುಭವಕ್ಕೆ ಬರುತ್ತಿತ್ತು. ಎರೇಸೀಮೆಯವರಿಗೆ ಕುಡಿಯಲು ಬಿಸಿನೀರೇ ಬೇಕು. ಹೋಟೆಲ್ ಮಾಣಿಗೆ ಬಿಸಿನೀರು ಬೇಕು ಎಂದರೆ ಅರ್ಥವಾಗಲಿಲ್ಲ. ಬೇರೊಂದು ಲೋಟದಲ್ಲಿ ತಣ್ಣೀರನ್ನೇ ತಂದಿಟ್ಟ. ಆಗ ಎರೇಸೀಮೆಯವರು ತಂದಿಟ್ಟ ಲೋಟದಲ್ಲಿದ್ದ ನೀರಿಗೆ ಬೆರಳನ್ನು ಅದ್ದಿ ಅದು ಸುಟ್ಟಿತೆಂಬಂತೆ ತಕ್ಷಣ ಹಿಂತೆಗೆದುಕೊಂಡು ‘ಅಂಥ ನೀರುಬೇಕು’ ಎಂದರು. ನಾಟಕೀಯವಾದ ಅವರ
ಅಭಿನಯದಿಂದ ಆ ತಮಿಳನಿಗೆ ಅವರ ಬೇಡಿಕೆ ಅರ್ಥವಾಗಿ ‘ಸುಡು ತಣ್ಣಿಯಾ’ ಎಂದು ನಗುತ್ತಾ ಹೋಗಿ ಎರಡು ಲೋಟ ಬಿಸಿನೀರು ತಂದಿಟ್ಟನು. ಚೆನ್ನಪ್ಪನವರು ಇನ್ನೊಬ್ಬರ ಮನದ ಇಂಗಿತವನ್ನು ಅರಿತು ಅವರ ನಾಡಿಮಿಡಿತಕ್ಕೆ ತಕ್ಕ ಹಾಗೆ ಸ್ಪಂದಿಸುವುದರಲ್ಲಿ ನಿಪುಣರಾಗಿದ್ದಂತೆ, ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೇಳುಗರಿಗೆ ಮನದಟ್ಟು ಮಾಡಿಕೊಡುವಲ್ಲಿಯೂ ನಿಷ್ಣಾತರಾಗಿದ್ದುದನ್ನು ಬಲ್ಲ ನಾನು ಮೇಲಿಂದ ಮೇಲೆ ಈ ಘಟನೆಯನ್ನು ನೆನಪು ಮಾಡಿಕೊಳ್ಳುತ್ತೇನೆ” ಎಂದು ತಮ್ಮ ಅನಿಸಿಕೆಗಳನ್ನು ಲೇಖನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಶಿಕ್ಷಣ ಇಲಾಖೆಯ ವಿವಿಧ ಸಮಿತಿಗಳಲ್ಲಿ : ಪಂಡಿತ ಚೆನ್ನಪ್ಪ ಎರೇಸೀಮೆಯವರ ವಿದ್ವತ್ತನ್ನು ಗಮನಿಸಿದ ಸರ್ಕಾರ ಅನೇಕ ಸಮಿತಿಗಳಲ್ಲಿ ನೇಮಕ ಮಾಡಿ ಅವರ ಪಾಂಡಿತ್ಯವನ್ನು ಬಳಸಿಕೊಂಡಿತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪಠ್ಯಪುಸ್ತಕ ಸಮಿತಿ, ಕರ್ನಾಟಕ ರಾಜ್ಯದ ಪ್ರೌಢಶಾಲಾ ಪಠ್ಯಪುಸ್ತಕ ಸಮಿತಿ, ಕರ್ನಾಟಕ ರಾಜ್ಯ ಪಿ.ಯು.ಸಿ. ಬೋರ್ಡ್ ಪಠ್ಯಪುಸ್ತಕ ಸಮಿತಿ, ಕೇರಳ ರಾಜ್ಯ ಪಠ್ಯಪುಸ್ತಕ ಸಮಿತಿ, ಪ್ರೌಢಶಾಲಾ ಪಾಠಪಠ್ಯ ಸಮಿತಿ, ಭಾರತ ಸರ್ಕಾರದ ಪಠ್ಯಪುಸ್ತಕ ಸಮಿತಿಗಳು – ಹೀಗೆ ಹಲವಾರು ಸಮಿತಿಗಳಲ್ಲಿ ಇವರ ವಿದ್ವತ್ತನ್ನು ಬಳಸಿಕೊಳ್ಳಲಾಗಿದೆ.
ಗೌರವ ಪ್ರಶಸ್ತಿಗಳು : ಪಂಡಿತ ಚೆನ್ನಪ್ಪ ಎರೇಸೀಮೆಯವರು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಹಲವಾರು ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಇದರಿಂದ ಚೆನ್ನಪ್ಪ ಎರೇಸೀಮೆಯವರಿಗಿಂತ ಪ್ರಶಸ್ತಿಗಳಿಗೆ ಮಹತ್ವ ಬಂದಿತು. ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೊಪ್ಪಳದಲ್ಲಿ ನಡೆದ 62ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬೆಂಗಳೂರು
ಗಾಜಿನ ಮನೆಯಲ್ಲಿ ನಡೆದ ಬಸವ ಜಯಂತಿ, ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ 81ನೆಯ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಅವರನ್ನು ಗೌರವಿಸಲಾಗಿದೆ. ಅಲ್ಲದೆ ಶ್ರೀ ಉದ್ದಾನೇಶ ಚರಿತೆಗೆ ಸುತ್ತೂರು ಮಠವು ನೀಡುವ ಕಾವ್ಯ ಪುರಸ್ಕಾರ ಹಾಗೂ 20ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸನ್ಮಾನಿಸಿ ತಮ್ಮ ಸಂಸ್ಥೆಗಳ ಗೌರವವನ್ನು ಹೆಚ್ಚಿಸಿಕೊಂಡಿವೆ. ಶ್ರೀಮಠ ಕೊಡಮಾಡುವ ಪ್ರಶಸ್ತಿಯು ‘ಸಿದ್ಧಗಂಗಾಶ್ರೀ’ ಪ್ರಶಸ್ತಿಯನ್ನು ಎರೇಸೀಮೆಯವರಿಗೆ 2010 ರಲ್ಲಿ ಮರಣೋತ್ತರವಾಗಿ ನೀಡುವುದರ ಮೂಲಕ
ಗೌರವವನ್ನು ಅರ್ಪಿಸಿದೆ.
ಅಮೂಲ್ಯ ಕೊಡುಗೆ : ಎರೇಸೀಮೆಯವರು ತಮ್ಮ ವೃತ್ತಿ ಜೀವನದಲ್ಲಿ ಸಂಗ್ರಹಿಸಿದ ಸಾವಿರಾರು ಅಪರೂಪದ ಅಮೂಲ್ಯ ಕೃತಿಗಳ ಸದುಪಯೋಗ ನಾಡಿನ ಜನತೆಗೆ, ಅಧ್ಯಯನಶೀಲರಿಗೆ ಲಭ್ಯವಾಗಲಿ ಎಂಬ ಸದುದ್ದೇಶ
ದಿಂದ, ಹೃದಯವೈಶಾಲ್ಯತೆಯಿಂದ ತಮ್ಮಲ್ಲಿದ್ದ ಗ್ರಂಥ ಭಂಡಾರವನ್ನು ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಕಾಲೇಜಿನ ಗ್ರಂಥ ಭಂಡಾರಕ್ಕೆ ಕೊಡುಗೆಯಾಗಿ ನೀಡಿ ಇತರರಿಗೆ ಮಾರ್ಗದರ್ಶಿ ಯಾಗಿದ್ದಾರೆ.
ಪಂಡಿತ ಚೆನ್ನಪ್ಪ ಎರೇಸೀಮೆಯವರು ಸರಳತೆ, ಸಜ್ಜನಿಕೆ, ಸಹೃದಯತೆಯಿಂದ ಜನರ ಮನಸ್ಸನ್ನು ಗೆದ್ದವರು. ಅವರೊಂದಿಗೆ ಮಾತನಾಡುವುದೆಂದರೆ ರಸಾನುಭವದ ಅನುಭೂತಿಯಾಗುತ್ತಿತ್ತು. ಅವರೊಬ್ಬ ಅಜಾತಶತ್ರು. ನಡೆ-ನುಡಿಯಲ್ಲಿ ಏಕತಾನತೆಯನ್ನು ಕಾಪಾಡಿಕೊಂಡು ಹತ್ತು ಜನ ಮೆಚ್ಚುವಂತೆ ಒಪ್ಪವಾಗಿ ಬದುಕನ್ನು ಸಾಗಿಸಿದವರು. ಎಂತಹ ಪರಿಸ್ಥಿತಿಯಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದ ಸ್ಥಿತಪ್ರಜ್ಞತ್ವ. ನೋವಿನಲ್ಲೂ ತಾವು ನಕ್ಕು ಇತರರನ್ನೂ ನಗಿಸಿದ ಮಹಾನ್ ದಾರ್ಶನಿಕ ಎರೇಸೀಮೆ ಅವರು.
ಪಂಡಿತ ಚೆನ್ನಪ್ಪ ಎರೇಸೀಮೆಯವರು ನಾಡು-ನುಡಿಗೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಕೃತಜ್ಞತೆಯನ್ನು ಅರ್ಪಿಸಲು ಅವರ ಅಭಿಮಾನಿಗಳು, ವಿದ್ಯಾರ್ಥಿಗಳು, ನಾಗರಿಕರು ಸೇರಿ ಮಾರ್ಚ್ 3, 1999 ರಂದು ಅಭಿನಂದನಾ ಸಮಾರಂಭ ವನ್ನು ತುಂಬು ಸಂಭ್ರಮದಿಂದ ಆಚರಿಸಿದುದನ್ನು ಈ ಸಂದರ್ಭದಲಿ ಸ್ಮರಿಸ ಬಯಸುತ್ತೇನೆ.
ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಡಿ.ಎಂ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಸವಿನೆನಪಿಗಾಗಿ ಪಂ. ಚೆನ್ನಪ್ಪ ಎರೇಸೀಮೆಯವರು ಬರೆದ ‘ನನ್ನಕಥೆ’ ಎಂಬ ಆತ್ಮಕಥೆಯನ್ನು ಲೋಕಾರ್ಪಣೆ ಮಾಡಲಾಯಿತು.
ಈ ಕೃತಿಯನ್ನು ಕುರಿತು ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸರೂ, ನಿಘಂಟು ತಜ್ಞರೂ ಆಗಿದ್ದ ಶ್ರೀ ಟಿ.ಆರ್. ಮಹಾದೇವಯ್ಯನವರು ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ. “ಪಂ. ಚೆನ್ನಪ್ಪನವರು ತಮ್ಮ ನೆನಪಿನ ಗಣಿಯಿಂದ ಆಗೆದು ತೆಗೆದ ಅನಘ್ರ್ಯ ರತ್ನಗಳು ಇಲ್ಲಿವೆ. ಸ್ವಾರಸ್ಯವೆಂದರೆ ಅವರ ನಿರೂಪಣೆಯಲ್ಲಿ ನಮ್ಮ ನಾಡಿನ ಶೈಕ್ಷಣಿಕ ಹಾಗೂ ಸಾಮಾಜಿಕ ಇತಿಹಾಸದ ಪುಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಸಾಹಿತ್ಯದ ಬಾಯಿಗೆ ಸಿಕ್ಕದ ಅನೇಕ ಅಮೂಲ್ಯವಾದ ಜೀವನಶ್ರದ್ಧೆಯ, ಹೃದಯ ಶ್ರೀಮಂತಿಕೆಯ ವ್ಯಕ್ತಿಗಳ ಪರಿಚಯ ಇಲ್ಲಿ ಸಾಲುಗೊಂಡಿವೆ. ಹಿಂದಿನ ನಮ್ಮ ಗ್ರಾಮೀಣರ ಬದುಕಿನ ರಸಸ್ಥಾನಗಳು ಇಲ್ಲಿ ತೆರೆದುಕೊಂಡಿವೆ.
ಒಂಭತ್ತು ರೂ. ಪಗಾರದ ಒಬ್ಬ ಗಾಂವಠೀ ಶಾಲೆಯ ಮೇಷ್ಟ್ರರು ಕಡುಬಡತನ, ನಿರುತ್ಸಾಹದ ಸನ್ನಿವೇಶದಲ್ಲೂ ಧೈರ್ಯ, ಸಾಹಸ, ಶ್ರದ್ಧಾಸಕ್ತಿಗಳಿಂದ ಹಂತ ಹಂತವಾಗಿ ಮೇಲೇರಿ ಹೈಸ್ಕೂಲು, ತರಬೇತಿ ಕಾಲೇಜುಗಳಲ್ಲಿ ಭಾಷಾಬೋಧಕರಾಗಿ ಕೀರ್ತಿಗಳಿಸುವ ಹಂತಕ್ಕೆ ಏರಿದ ವೀರಗಾಥೆ ಇದು. ಅದರ ಜೊತೆಗೆ ಇಂದು ನೋಡ ಸಿಕ್ಕದ ಪ್ರಾದೇಶಿಕ ಸೊಗಡಿನ ವಿಶಿಷ್ಟ ಜೀವನದರ್ಶನ ಇಲ್ಲಿ ಆಗುತ್ತದೆ. ಇಲ್ಲಿ ಬಳಸಿರುವ ಭಾಷೆಯೂ ಸಹ ವಿಶಿಷ್ಟ ಬನಿಯ ಉತ್ತರ ಕರ್ನಾಟಕದ್ದು. ಅವರ ನಿರೂಪಣಾಶೈಲಿ ಆಕರ್ಷಕ. ಅವರು ಓದುಗರೊಡನೆ ಸಂವಾದ ಮಾಡುತ್ತಾ ಕಥೆ ಹೇಳಿದ್ದಾರೆ.
ನವರತ್ನರಾಂ ಅವರ ‘ಕೆಲವು ನೆನಪುಗಳು’, ಎಂ.ಆರ್. ಶ್ರೀಯವರ ‘ರಂಗಣ್ಣನ ಕನಸಿನ ದಿನಗಳು’, ಕೆ.ಆರ್. ರಾಮಚಂದ್ರನ್ ಅವರ ‘ತಾಪೇದಾರಿ’ ಮೊದಲಾದ ವೃತ್ತಿಪರ ಅನುಭವ ಕಥನಗಳ ಶ್ರೇಣಿಗಳ ಪಂ. ಚೆನ್ನಪ್ಪ ಎರೇಸೀಮೆಯವರ ‘ನನ್ನ ಕಥೆ’ ಸೇರಿತು. ಇಂಥ ರಸಬುತ್ತಿಯನ್ನು ಕನ್ನಡಿಗರಿಗೆ ನೀಡಿದ ಪಂ. ಚೆನ್ನಪ್ಪ ಎರೇಸೀಮೆಯವರು ಅಭಿನಂದನಾರ್ಹರು.” ಅವರ ಒಂದೊಂದು ನುಡಿಗಳು ಕೃತಿಯ ಮೌಲ್ಯವನ್ನು ಪರಿಚಯ ಮಾಡಿಕೊಡುತ್ತದೆ.
ಎಂಬತ್ತೈದು ವಸಂತಗಳ ಬೇವು-ಬೆಲ್ಲವನ್ನು ಸವಿದು, ಸಾರ್ಥಕ ಜೀವನ ನಡೆಸಿದ ಪಂಡಿತ ಚೆನ್ನಪ್ಪನವರು
ನಡೆದ ಬಂದ ದಾರಿ, ಏರಿದ ಸಾಧನೆಯ ಮೆಟ್ಟಿಲುಗಳು ಇಂದಿನ ಯುವ ಜನಾಂಗಕ್ಕೆ ದಾರಿದೀಪ. ಅವರು ಫೆಬ್ರವರಿ 20, 2004 ರಂದು ಶಿವನೊಳಗೊಂದಾದರು. ಅವರು ಭೌತಿಕವಾಗಿ ನಮ್ಮ ಮುಂದೆ ಇಲ್ಲದೇ ಹೋದರು ಅವರು ಬಿಟ್ಟು ಹೋದ ಆದರ್ಶಗಳು, ಮಾನವೀಯ ಮೌಲ್ಯಗಳು, ಸಾಹಿತ್ಯ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ನಮಗೆಲ್ಲ ದಾರಿದೀಪವಾಗಿದೆ.